ಜಮ್ಮು-ಕಾಶ್ಮೀರ: ಕಿಶ್ತ್ವಾರ್‌ನಲ್ಲಿ ಹಳ್ಳಕ್ಕೆ ಬಿದ್ದ ಪ್ರಯಾಣಿಕರ ಬಸ್, 30ಕ್ಕೂ ಅಧಿಕ ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಇಂದು ಬೆಳಿಗ್ಗೆ ಭೀಕರ ಅಪಘಾತ ಸಂಭವಿಸಿದೆ. ಕಿಶ್ತ್ವಾರ್‌ ಪ್ರದೇಶದಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಒಂದು ಆಳವಾದ ಹಳ್ಳಕ್ಕೆ ಬಿದ್ದ ಪರಿಣಾಮ 30 ಅಧಿಕ ಮಂದಿ ಸಾವನ್ನಪ್ಪಿದ್ದು, 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅದಾಗ್ಯೂ, ಸತ್ತವರ ಸಂಖ್ಯೆ ದೃಢಪಟ್ಟಿಲ್ಲ.

ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ರಕ್ಷಣಾ ತಂಡವು ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದೆ.

ವರದಿಗಳ ಪ್ರಕಾರ, ಜೆಕೆ 17-6787 ಎಂಬ ಮಿನಿಬಸ್ ಕೇಶ್ವಾನ್‌ನಿಂದ ಕಿಶ್ತ್ವಾರ್‌ಗೆ ತೆರಳುತ್ತಿದ್ದಾಗ, ವಾಹನವು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಸುಮಾರು 250 ಅಡಿಗಳಷ್ಟು ಕೆಳಗೆ ಉರುಳಿದೆ, ಕಿಶ್ತ್ವಾರ್ ಪಟ್ಟಣದಿಂದ 23 ಕಿಲೋಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ.

ಬೆಳಿಗ್ಗೆ 7: 30 ರ ಸುಮಾರಿಗೆ ಕೀಸ್ಸಾನ್‌ನಿಂದ ಕಿಶ್ತ್ವಾರ್‌ಗೆ ತೆರಳುತ್ತಿದ್ದ ಬಸ್ ಸರ್ಗಾವರಿ ಬಳಿ ಹಳ್ಳಕ್ಕೆ ಬಿದ್ದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  20 ಪ್ರಯಾಣಿಕರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಮ್ಮುವಿನ ಇನ್ಸ್‌ಪೆಕ್ಟರ್ ಜನರಲ್ ಎಂ.ಕೆ. ಮಿಶ್ರಾ ತಿಳಿಸಿದ್ದಾರೆ.

ಮೊದಲು 24 ಜನರ ಸಾವಿನ ಬಗ್ಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದರು. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಮಿಶ್ರಾ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ