ಬೆಂಗಳೂರು, ಜೂ.29 -ಜಿಂದಾಲ್ ಸಂಸ್ಥೆಗೆ 3667 ಎಕರೆ ಭೂಮಿಯನ್ನು ವಹಿಸುವ ಮೊದಲು ರಾಜ್ಯದ ಸಮಗ್ರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಣಯ ತೆಗೆದುಕೊಳ್ಳಬೇಕು ಎಂದು ಶಾಸಕ ಹಾಗೂ ಮಾಜಿ ಸಚಿವ ಎಚ್.ಕೆ.ಪಾಟೀಲ್ ಸಚಿವ ಸಂಪುಟದ ಉಪಸಮಿತಿ ಅಧ್ಯಕ್ಷರಾಗಿರುವ ಎಂ.ಬಿ.ಪಾಟೀಲ್ ಅವರಿಗೆ ಪತ್ರ ಬರೆದಿದ್ದಾರೆ.
ಸುಮಾರು 9 ಪ್ರಮುಖ ಅಂಶಗಳ ಸಲಹೆಯನ್ನು ನೀಡಿರುವ ಎಚ್.ಕೆ.ಪಾಟೀಲ್ ಅವರು ಈ ಹಿಂದೆ ಲೀಸ್ ಕಂ ಸೇಲ್ನಲ್ಲಿ ಮಾಡಿಕೊಂಡ ಕರಾರುಗಳು ಪಾಲನೆಯಾಗಿವೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು, ಪ್ರತಿ ಎಕರೆಗೆ 1.22 ಲಕ್ಷ ರೂ.ನಷ್ಟು ಕಡಿಮೆ ಬೆಲೆಗೆ ಕ್ರಯಪತ್ರ ಮಾಡಿಕೊಡುವುದು ಸಮಂಜಸವೇ, ಇದರಿಂದ ಸರ್ಕಾರಕ್ಕಾಗುವ ಹಾನಿಯನ್ನು ಅಂದಾಜು ಮಾಡಲಾಗಿದೆಯೇ? ಸಾರ್ವಜನಿಕ ಆಸ್ತಿ ಪರಭಾರೆ, ಕೈಗಾರಿಕಾ ನೀತಿಯ ಮಾರ್ಗಸೂಚಿಗಳು ಪಾಲನೆಯಾಗಿವೆಯೇ? ಮೈಸೂರು ಮಿನರಲ್ಸ್ ಜೊತೆ ಮಾಡಿಕೊಂಡ ಅದಿರು ಅಧಿಮೌಲ್ಯವನ್ನು ಪಾವತಿಸುವಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು, ಅದನ್ನು ಜಿಂದಾಲ್ ಸಂಸ್ಥೆ ಪಾಲಿಸಿದೆಯೇ? ಆಡಿಟ್ ಜನರಲ್ ಅವರು ಶಿಫಾರಸುಗಳನ್ನು ಪರಿಶೀಲಿಸಲಾಗಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು, ಸರ್ಕಾರ ಭೂಮಿ ಮಾರಾಟದ ನಂತರ ಆ ಭೂಮಿಯಲ್ಲಿ ಸಿಗುವ ಖನಿಜ ಸಂಪತ್ತಿನ ಮಾರಾಟದ ಕರಾರು ಪತ್ರದಲ್ಲಿ ಸ್ಪಷ್ಟವಾಗಿ ಮಾಹಿತಿ ಇಲ್ಲ. ಹಾಗಾಗಿ ಸರ್ಕಾರ ಜಿಂದಾಲ್ಗೆ ನೀಡುವ ಭೂಮಿಯ ಖನಿಜ ಸಂಪತ್ತಿನ ಒಡೆತನವನ್ನು ಸರ್ಕಾರವೇ ಉಳಿಸಿಕೊಳ್ಳಬೇಕು ಎಂದು ಎಚ್.ಕೆ.ಪಾಟೀಲ್ ಶಿಫಾರಸು ಮಾಡಿದ್ದಾರೆ.
ಜಿಂದಾಲ್ ಸಂಸ್ಥೆ ವಿಷಯವಾಗಿ ಪದೇ ಪದೇ ಬಹಿರಂಗ ಚರ್ಚೆ ಮಾಡುತ್ತಿರುವ ಎಚ್.ಕೆ.ಪಾಟೀಲ್ ಅವರು, ರಾಜ್ಯ ಸರ್ಕಾರದ ನಿರ್ಣಯವನ್ನು ಪ್ರಬಲವಾಗಿ ವಿರೋಧಿಸುತ್ತಿದ್ದಾರೆ.
ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಹಲವಾರು ಮಂದಿ ಸರ್ಕಾರದ ನಿರ್ಣಯವನ್ನು ಸಮರ್ಥಿಸಿಕೊಳ್ಳುತ್ತಿದ್ದರೆ, ಎಚ್.ಕೆ.ಪಾಟೀಲ್ ಅದಕ್ಕೆ ಪ್ರತಿವಾದ ಮಾಡುತ್ತಾ ಸಾರ್ವಜನಿಕ ಆಸ್ತಿ ರಕ್ಷಣೆಗಾಗಿ ಸ್ವಪಕ್ಷೀಯರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.