ಸಚಿವ ಜಮೀರ್‍ರವರಿಂದ ಐಎಂಎ ಮಾಲೀಕ ಮನ್ಸೂರ್‍ಗೆ ಬಿಬಿಎಂಪಿ ಆಸ್ತಿ ಮಾರಾಟ

ಬೆಂಗಳೂರು, ಜೂ.29-ಸಾವಿರಾರು ಕೋಟಿ ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಐಎಂಎ ಜುವೆಲ್ಸ್‍ನ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್‍ಗೆ ಸಚಿವ ಜಮೀರ್ ಅಹಮ್ಮದ್ ಖಾನ್ ಕಾನೂನು ಬಾಹಿರವಾಗಿ ಬಿಬಿಎಂಪಿ ಆಸ್ತಿಯೊಂದನ್ನು ಮಾರಾಟ ಮಾಡಿ 80 ಕೋಟಿ ಕಪ್ಪು ಹಣವನ್ನು ಗುಳುಂ ಮಾಡಿದ್ದಾರೆ.

ಇದಕ್ಕೆ ಪಾಲಿಕೆಯ ಕೆಲ ಭ್ರಷ್ಟ ಅಧಿಕಾರಿಗಳು ಸಾಥ್ ನೀಡಿದ್ದಾರೆ ಎಂದು ಬಿಜೆಪಿ ನಗರ ವಕ್ತಾರ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಶಾಂತಿನಗರ ಉಪವಿಭಾಗದ ಎಆರ್‍ಒ ಮತ್ತು ವಾರ್ಡ್ 117ರ ಆರ್‍ಐ ಜಮೀರ್ ಅಹಮ್ಮದ್ ಖಾನ್‍ಗೆ ಸಾಥ್ ನೀಡಿದ್ದು, ಇವರೆಲ್ಲರ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಿಸುವುದಾಗಿ ತಿಳಿಸಿದರು.

ಮೊಹಮ್ಮದ್ ಮನ್ಸೂರ್ ಖಾನ್‍ಗೆ 19 ವರ್ಷಗಳಿಂದ ನ್ಯಾಯಾಲಯದಲ್ಲಿ ವಿವಾದದಲ್ಲಿರುವ 90 ಕೋಟಿಗೂ ಹೆಚ್ಚು ಬೆಲೆಬಾಳುವ ಸ್ವತ್ತನ್ನು 9.38 ಕೋಟಿಗೆ ಮಾರಾಟ ಮಾಡಿ ಜಮೀರ್ ಅಹಮ್ಮದ್ ಅವರು ನೋಂದಣಿ ಮಾಡಿಸಿಕೊಟ್ಟಿದ್ದಾರೆ. ಈ ಮೂಲಕ 80 ಕೋಟಿಗೂ ಹೆಚ್ಚು ಕಪ್ಪು ಹಣ ಮಾಡಿಕೊಂಡಿದ್ದಾರೆ ಎಂದು ದೂರಿದರು.

ರಿಚ್ಮಂಡ್‍ಟೌನ್‍ನ ಸರ್ಪೆಂಟೈನ್ ಸ್ಟ್ರೀಟ್‍ನಲ್ಲಿ ಈ ವಿವಾದಿತ ಸ್ವತ್ತು ಇದ್ದು, 14,984 ಚದರಡಿ ವಿಸ್ತೀರ್ಣದ 38 ಮತ್ತು 39 ನೇ ನಂಬರಿನಲ್ಲಿರುವ ಸ್ವತ್ತುಗಳನ್ನು ಮಾರಾಟ ಮಾಡಲಾಗಿದೆ. ಷಾ ನವಾಜ್ ಬೇಗಂ ಮತ್ತು ಅಗಜಾನ್ ಆಸ್ಕರ್ ಅಲಿ ಎಂಬುವರ ಮಧ್ಯೆ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಸ್ವತ್ತು ವಿವಾದದಲ್ಲಿದೆ.

ತಡೆಯಾಜ್ಞೆ ಇದ್ದರೂ ಸಹ 2009ರ ಜುಲೈ 3ರಲ್ಲಿ ಷಾ ನವಾಜ್ ಬೇಗಂ ಅಲಿಯಾಸ್ ಯಾಕುತ್ ಬೇಗಂ ಅವರಿಂದ ಶಿವಾಜಿನಗರ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ಜಮೀರ್ ಅಹಮ್ಮದ್ ತಮ್ಮ ಹೆಸರಿಗೆ ಆಸ್ತಿ ನೋಂದಣಿ ಮಾಡಿಕೊಂಡಿದ್ದಾರೆ.

ನಂತರ 2018ರ ಏ.13 ರಂದು ಈ ವಿವಾದಿತ ಸ್ವತ್ತಿನ ಖಾತೆಯನ್ನು ಪಾಲಿಕೆ ಅಧಿಕಾರಿಗಳು ಜಮೀರ್ ಅಹಮ್ಮದ್ ಖಾನ್ ಹೆಸರಿಗೆ ವರ್ಗಾವಣೆ ಮಾಡಿಕೊಟ್ಟಿದ್ದಾರೆ.

ಕೇವಲ 12 ದಿನಗಳಲ್ಲಿ ಶಾಂತಿನಗರ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ಖಾತೆ ವರ್ಗಾವಣೆ ಮಾಡಿಕೊಟ್ಟಿದ್ದಾರೆ ಎಂದು ಎನ್.ಆರ್.ರಮೇಶ್ ದೂರಿದರು.

ನೋಂದಣಿ ಪ್ರಕ್ರಿಯೆ ಸ್ವತ್ತಿನ ಕ್ರಯಪತ್ರದಲ್ಲಿ ಕೇವಲ 9.38 ಕೋಟಿ ಮಾತ್ರ ನಮೂದಾಗಿದೆ.ಉಳಿದ 80 ಕೋಟಿ ರೂ.ಕಪ್ಪು ಹಣವನ್ನು ಜಮೀರ್ ಅಹಮ್ಮದ್ ಖಾನ್ ಮಹಮ್ಮದ್ ಮನ್ಸೂರ್ ಖಾನ್ ಖಜಾನೆಯಿಂದ ಲಪಟಾಯಿಸಿದ್ದಾರೆ ಎಂದು ಆರೋಪ ಮಾಡಿದ ಅವರು, ಈ ಸಂಬಂಧ 430 ಪುಟಗಳ ದಾಖಲೆ ಬಿಡುಗಡೆ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ