ಸಿಎಂ ವರ್ತನೆ ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ-ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ

ಬೆಂಗಳೂರು,ಜೂ.27- ಕಷ್ಟ ಹೇಳಲು ಬಂದ ಜನರೊಂದಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವರ್ತಿಸಿದ ರೀತಿ ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಆ ಹೇಳಿಕೆಗೆ ಸಂಬಂಧಿಸಿದಂತೆ ಅವರು ರಾಜ್ಯದ ಜನತೆಯ ಕ್ಷಮೆಕೇಳಬೇಕೆಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಮತದಾರನ ಹಕ್ಕನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಮತದಾರರಿಗೆ ಮತದಾನ ಮಾಡುವ ಸಂಪೂರ್ಣ ಸ್ವಾತಂತ್ರ್ಯವಿರುತ್ತದೆ. ಹೀಗಿದ್ದರೂ ಸಮಸ್ಯೆ ಹೇಳಲು ಬಂದ ಜನರ ಬಳಿ, ಪ್ರಧಾನಿ ಮೋದಿಗೆ ವೋಟ್ ಹಾಕ್ತೀರಾ, ಕೆಲಸಕ್ಕೆ ಮಾತ್ರ ನನ್ನ ಬಳಿ ಬರುತ್ತೀರ ಎಂದಿರುವುದು ಸರಿಯಲ್ಲ. ಮುಖ್ಯಮಂತ್ರಿಯಾಗಿರುವುದಕ್ಕೆ ಜನ ಬರುತ್ತಾರೆ. ಇಲ್ಲದಿದ್ದರೆ ಯಾರೂ ಬರುವುದಿಲ್ಲ ಎಂದು ಛೇಡಿಸಿದರು.

ಜನರ ಸಮಸ್ಯೆ ಪರಿಹರಿಸಲಾಗದಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಿ. ಗ್ರಾಮವಾಸ್ತವ್ಯ ಮಾಡುತ್ತಿರುವುದೇ ಜನರ ಸಮಸ್ಯೆ ಆಲಿಸುವುದಕ್ಕಲ್ಲವೇ.

ಮೋದಿಗೆ ವೋಟ್ ಹಾಕ್ತೀರ ಎಂದರೆ ಹೇಗೆ? ಯಾರ್ಯಾರು ಮೋದಿಗೆ ವೋಟ್ ಹಾಕಿದ್ದೀರೋ ಅವರ್ಯಾರು ತನ್ನ ಬಳಿ ಬರಬೇಡಿ ಎಂದು ಬೋರ್ಡ್ ಹಾಕೊಂಡುಬಿಡಿ ಎಂದರು.

ಸಮಸ್ಯೆ ಹೇಳಲು ಬಂದ ಜನರ ಮೇಲೆ ಪೌರುಷ ತೋರಿಸಿದರೆ ನಡೆಯುವುದಿಲ್ಲ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿಯವರಿಗೆ ಯಾವ ಪರಿಸ್ಥಿತಿ ಬಂತು ಎಂಬುದನ್ನು ಮುಖ್ಯಮಂತ್ರಿಗಳು ನೆನಪಿಟ್ಟುಕೊಳ್ಳಬೇಕು ಎಂದರು.

ರಾಜ್ಯ ಸರ್ಕಾರ ಸರಿಯಿಲ್ಲ ಎಂದು ಮೋದಿ ಅವರಿಗೆ ಜನ ವೋಟ್ ಹಾಕಿದ್ದಾರೆ. ನಾನು ಶಾಸಕರಾಗಿರುವುದಕ್ಕೆ ನಮ್ಮೂರಿನ ಜನ ನನ್ನ ಬಳಿ ಬರುತ್ತಾರೆ.

ಶಾಸಕನಲ್ಲದಿದ್ದರೆ ಯಾರು ಬರುತ್ತಿದ್ದರು. ಹಾಗೇ ಕುಮಾರಸ್ವಾಮಿ ಅವರ ಬಳಿ ಕಷ್ಟ ಹೇಳಿಕೊಳ್ಳಲು ಬರುತ್ತಾರೆ ಎಂದರು.

ಹಾಸನದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮತ ಹಾಕಿಲ್ಲವೇ ಅದು ಮೋದಿಗೆ ವೋಟ್ ಹಾಕಿದ್ದ ಎಂದು ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ