ಗೂಂಡಾ ಎಂಬ ಹೇಳಿಕೆಯನ್ನು ಸಿಎಂ ವಾಪಾಸ್ ಪಡೆಯಬೇಕು-ಶಾಸಕ ರೇಣುಕಾಚಾರ್ಯ

ಬೆಂಗಳೂರು,ಜೂ.27-ನಮ್ಮ ಶಾಸಕರನ್ನು ಗೂಂಡಾ ಎಂದು ಕರೆದಿರುವ ಹೇಳಿಕೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಪಸ್ ಪಡೆಯಬೇಕೆಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಇಂದಿಲ್ಲಿ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡುವುದರಲ್ಲಿ ತಾರತಮ್ಯ ಮಾಡಲಾಗಿದೆ. ಇದೇ ರೀತಿ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡುವಲ್ಲಿ ತಾರತಮ ಮಾಡಲಾಗುತ್ತಿದೆ. ತಾರತಮ್ಯ ಹೋಗಲಾಡಿಸದಿದ್ದರೆ ಹೋರಾಟ ಮಾಡುವುದಾಗಿ ಹೇಳಿದರು.

ಮುಖ್ಯಮಂತ್ರಿಯವರು ನಾಟಕೀಯ ಗ್ರಾಮವಾಸ್ತವ್ಯವಾಗಿದೆ ಎಂದು ಟೀಕಿಸಿದ ಅವರು, ಶಾಸಕರಿಗೆ ಮಾಡುವ ಅವಮಾನ ಜನರಿಗೆ ಮಾಡಿದ ಅವಮಾನವಾಗುತ್ತದೆ. ವಿಧಾನಸೌಧದಲ್ಲಿ ಸಚಿವರೇ ಸಿಗುವುದಿಲ್ಲ ಎಂದು ಆರೋಪಿಸಿದರು.

ಕಳೆದ ಒಂದು ವರ್ಷದಲ್ಲಿ ಸಮ್ಮಿಶ್ರ ಸರ್ಕಾರ ಜನಪರವಾದ ಆಡಳಿತ ಕೊಟ್ಟಿಲ್ಲ. ಕೇವಲ ನಾಲ್ಕು ಜಿಲ್ಲೆಗೆ ಮಾತ್ರ ಸೀಮಿತವಾಗಿದೆ. ಈ ವಿಚಾರದಲ್ಲಿ ಸದನದ ಒಳ-ಹೊರಗೆ ಹೋರಾಟ ಮಾಡಿದ್ದೇವೆ ಎಂದರು.

ಲೋಕಸಭೆ ಚುನಾವಣೆ ಸೋಲಿನಿಂದ ಹತಾಶರಾಗಿ ಮನಬಂದಂತೆ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದಾರೆ. ಗ್ರಾಮವಾಸ್ತವ್ಯಕ್ಕೂ ಮುನ್ನ ಹಾಸಿಗೆ, ದಿಂಬು, ಶೌಚಾಲಯ ಬರುತ್ತದೆ. ನಂತರ ಅವು ಕಾಣದಂತೆ ಮಾಯವಾಗುತ್ತವೆ ಎಂದು ವ್ಯಂಗ್ಯವಾಡಿದರು.

ಗ್ರಾಮವಾಸ್ತವ್ಯದಲ್ಲಿ ಹೋಟೆಲ್‍ನ ಭೃಷ್ಟಾನ್ನ ಭೋಜನವನ್ನು ಸಿಎಂ ಮಾಡುತ್ತಿದ್ದಾರೆ ಎಂದ ಅವರು, ಸಿಎಂ ಅವರದು ಹೈಫೈ ಗ್ರಾಮವಾಸ್ತವ್ಯವಾಗಿದೆ. ಮುಖ್ಯಮಂತ್ರಿಯವರು ತೊಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಐಎಂಎ ಜ್ಯುವೆಲರ್ಸ್ ವಂಚನೆ ಪ್ರಕರಣದಲ್ಲಿ ಶಾಮೀಲಾಗಿರುವವರಿಗೆ ಶಿಕ್ಷೆಯಾಗಬೇಕು ಎಂದು ರೇಣುಕಾಚಾರ್ಯ ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ