ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ಮಧುಬಂಗಾರಪ್ಪನವರನ್ನು ನೇಮಕ ಮಾಡಿ-ಎಚ್.ವಿಶ್ವನಾಥ್

ಬೆಂಗಳೂರು, ಜೂ.25- ಜೆಡಿಎಸ್ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಮಾಜಿ ಶಾಸಕ ಮಧುಬಂಗಾರಪ್ಪ ಅವರನ್ನು ನೇಮಕ ಮಾಡಬೇಕೆಂದು ಶಾಸಕ ಎಚ್.ವಿಶ್ವನಾಥ್ ಪಕ್ಷದ ವರಿಷ್ಠರನ್ನು ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ರಾಜ್ಯಾಧ್ಯಕ್ಷರಾದವರು ನೂತನ ಅಧ್ಯಕ್ಷರಿಗೆ ಪಕ್ಷದ ಬಾವುಟ ನೀಡಿ ಅಧಿಕಾರ ಹಸ್ತಾಂತರ ಮಾಡುವುದು ವಾಡಿಕೆ. ಅಧಿಕಾರ ಹಸ್ತಾಂತರದ ಕೆಲಸವನ್ನು ತಾವು ಮಾಡುವುದಾಗಿ ಹೇಳಿದರು.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಾವು ಈಗಾಗಲೇ ರಾಜೀನಾಮೆ ನೀಡಿದ್ದು, ಆ ಸ್ಥಾನವನ್ನು ಮಧುಬಂಗಾರಪ್ಪ ಅವರಿಗೆ ನೀಡಬೇಕೆಂದು ಸಲಹೆ ನೀಡಿರುವಾಗಿ ತಿಳಿಸಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ವಿಶ್ವನಾಥ್ ಅವರು, ಆಡಳಿತವನ್ನು ಚುರುಕುಗೊಳಿಸಲು ಹಾಗೂ ಅಧಿಕಾರಿಗಳನ್ನು ಎಚ್ಚರಿಸಲು ಗ್ರಾಮ ವಾಸ್ತವ್ಯ ಸಹಕಾರಿಯಾಗಲಿದೆ. ಜನರ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಹೀಗಾಗಿ ಸಮಸ್ಯೆಗಳ ಪರಿಹಾರಕ್ಕಾಗಿ ಮುಖ್ಯಮಂತ್ರಿ ಮಾತ್ರವಲ್ಲ ಜಿಲ್ಲಾಧಿಕಾರಿಗಳು ಕೂಡ ಗ್ರಾಮ ವಾಸ್ತವ್ಯ ಮಾಡುವುದು ಸೂಕ್ತ ಎಂದರು.

ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜನರು ದೂರು ಹೇಳಿಕೊಂಡು ಬಂದಾಗ ಅದನ್ನು ಆಡಳಿತ ವೈಫಲ್ಯವೆಂದು ಪರಿಗಣಿಸಿ ತಮ್ಮ ಆಪ್ತರಾಗಿದ್ದ ಜಿಲ್ಲಾಧಿಕಾರಿಗಳನ್ನೇ ವರ್ಗಾವಣೆ ಮಾಡಿದ್ದನ್ನು ವಿಶ್ವನಾಥ್ ಇಂದಿಲ್ಲಿ ಸ್ಮರಿಸಿದರು.

ಮುಖ್ಯಮಂತ್ರಿಯವರ ಗ್ರಾಮ ವಾಸ್ತವ್ಯದ ಬಗ್ಗೆ ಬಿಜೆಪಿಯವರು ಅನವಶ್ಯಕವಾಗಿ ಮಾತನಾಡುತ್ತಿರುವುದು ಒಳ್ಳೆಯದಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿದ್ದಾಗಲೇ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ಪ್ರಾರಂಭವಾಗಿದೆ. ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ಕೆಲಸವನ್ನು ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಮಾಡಲಾಗುತ್ತಿದೆ. ಈ ಹಿಂದೆ ಜಿಲ್ಲಾಧಿಕಾರಿಗಳು ಜನರ ಸಮಸ್ಯೆಗಳನ್ನು ಆಲಿಸಿ ಸಮಸ್ಯೆ ಪರಿಹರಿಸುವ ಕೆಲಸ ಮಾಡುತ್ತಿದ್ದರು ಎಂದರು.

ಗ್ರಾಮ ವಾಸ್ತವ್ಯ ಮಾಡುವುದು ಅಧಿಕಾರಿಗಳ ಕಾರ್ಯವೈಫಲ್ಯ ಎಂದು ಅರ್ಥವಲ್ಲ. ಏಕೆಂದರೆ ಸಮಸ್ಯೆಗಳಿಗೆ ಕೊನೆ ಇರುವುದಿಲ್ಲ. ಪ್ರತಿ ಗಳಿಗೆಯೂ ಸಮಸ್ಯೆಗಳು ಹುಟ್ಟುತ್ತಿರುತ್ತವೆ. ಅಧಿಕಾರಿಗಳು ಕೂಡ ರಾತ್ರಿ ವಾಸ್ತವ್ಯ ಮಾಡಬೇಕು.ಏಕೆಂದರೆ ಗ್ರಾಮೀಣ ಭಾಗದ ಜನರು ಸಿಗುವುದೇ ರಾತ್ರಿ ವೇಳೆ ಎಂದು ಹೇಳಿದರು.

ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಮಾಡುವ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಪ್ರತ್ಯೇಕ ಹಣಕಾಸು ಸಚಿವರು ಇರಬೇಕು ಎಂಬ ಸಲಹೆ ಇದೆ. ಇತ್ತೀಚಿನ ವರ್ಷಗಳಲ್ಲಿ ಮುಖ್ಯಮಂತ್ರಿಗಳೇ ಹಣಕಾಸು ಖಾತೆಯನ್ನು ಹೊಂದಿರುವುದರಿಂದ ಈ ಕೆಲಸ ಸಾಧ್ಯವಾಗುತ್ತಿಲ್ಲ ಎಂದರು.

ಮುಖ್ಯಮಂತ್ರಿಗಳಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಬೇರೆ ಬೇರೆ ಇಲಾಖೆಗಳು ಮುಖ್ಯಮಂತ್ರಿಗಳ ಬಳಿ ಇರುವುದರಿಂದ ಹಣಕಾಸು ಇಲಾಖೆಗೆ ಪ್ರತ್ಯೇಕ ಸಚಿವರಿರುವುದು ಉತ್ತಮ ಎಂಬ ಭಾವನೆಯನ್ನು ವ್ಯಕ್ತಪಡಿಸಿದರು.

ಯಾವುದೇ ಅಧಿಕಾರಿ ಹಣ ದುರುಪಯೋಗ ಮಾಡಿದ್ದರೆ ಅಥವಾ ನಿಗದಿತ ಅವಧಿಯಲ್ಲಿ ಕೆಲಸ ಮುಗಿಸದಿದ್ದರೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸರ್ಕಾರಕ್ಕೆ ವರದಿ ನೀಡುತ್ತದೆ. ಸರ್ಕಾರಕ್ಕೆ ವರದಿ ನೀಡುವ ಕೆಲಸವನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮಾಡುತ್ತದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ