ಕನಕಪುರದಲ್ಲಿ ತಲೆ ಎತ್ತಲಿರುವ ಏಮ್ಸ್ ಮಾದರಿಯ ಆತ್ಯಾಧುನಿಕ ಆಸ್ಪತ್ರೆ

ಬೆಂಗಳೂರು, ಜೂ.25- ದೇಶದ ಅತ್ಯಂತ ಪ್ರತಿಷ್ಟಿತ ವೈದ್ಯಕೀಯ ಸಂಸ್ಥೆ ಎನಿಸಿದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಮಾದರಿಯಲ್ಲಿ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ತವರು ಕ್ಷೇತ್ರ ಕನಕಪುರದಲ್ಲಿ ಆತ್ಯುಧುನಿಕ ಆಸ್ಪತ್ರೆ ಶೀಘ್ರ್ರದಲ್ಲಿ ತಲೆ ಎತ್ತಲಿದೆ.

ಸುಮಾರು 600 ಕೋಟಿ ರೂ. ವೆಚ್ಚದಲ್ಲಿ ಕನಕಪುರ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಎಂಬ ಬೃಹತ್ ಆಸ್ಪತ್ರೆಯನ್ನು 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ದೆಹಲಿಯ ಏಮ್ಸ್ ಆಸ್ಪತ್ರೆ ದೇಶದಲ್ಲೇ ವಿಖ್ಯಾತವಾಗಿದ್ದು, ಅದೇ ದರ್ಜೆಯ ಆಸ್ಪತ್ರೆಯನ್ನು ಕನಕಪುರದಲ್ಲಿ ನಿರ್ಮಿಸುವ ಮೂಲಕ ಐಟಿ ಹಬ್ ಎನ್ನಿಸಿಕೊಂಡ ಕರ್ನಾಟಕಕ್ಕೆ ಮತ್ತೊಂದು ಖ್ಯಾತಿ ದಕ್ಕಿಸಿಕೊಡಲು ಸರ್ಕಾರ ಮುಂದಾಗಿದೆ.

ಈ ಸಂಬಂಧ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಸ್ತಾವನೆಯನ್ನು ಸಿದ್ದಗೊಳಿಸುತ್ತಿದ್ದು, ಸದ್ಯದಲ್ಲೇ ವೈದ್ಯಕೀಯ ಶಿಕ್ಷಣ ಸಚಿವ ಇ.ತುಕಾರಾಂ ಅವರು ಸಚಿವ ಸಂಪುಟದ ಮುಂದಿಟ್ಟು ಈ ಆಸ್ಪತ್ರೆಯ ನಿರ್ಮಾಣಕ್ಕೆ ಅಂಗೀಕಾರ ಪಡೆಯಲಿದ್ದಾರೆ.

ವೈದ್ಯಕೀಯ ಶಿಕ್ಷಣ ಇಲಾಖೆಯ ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು ಇದೇ ರೀತಿ ಮೈಸೂರು, ಮಂಡ್ಯ, ಹುಬ್ಬಳ್ಳಿ ಹಾಗೂ ಬಳ್ಳಾರಿಯ ಜಿಲ್ಲಾ ಆಸ್ಪತ್ರೆಗಳಲ್ಲಿ ತಲಾ ಹದಿನೈದು ಕೋಟಿ ರೂ.ವೆಚ್ಚದ ಅತ್ಯಾಧುನಿಕ ಆಪರೇಷನ್ ಥಿಯೇಟರ್‍ಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

ಆರಂಭಿಕ ಹಂತದಲ್ಲಿ ಇಂತಹ ಆಪರೇಷನ್ ಥಿಯೇಟರ್ ಅನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದ್ದು, ಈ ತಿಂಗಳ ಅಂತ್ಯದ ವೇಳೆಗೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ.

ಆನಂತರ ಮಂಡ್ಯ, ಮೈಸೂರು, ಹುಬ್ಬಳ್ಳಿ ಹಾಗೂ ಬಳ್ಳಾರಿ ಜಿಲ್ಲಾ ಆಸ್ಪತ್ರೆಗಳಲ್ಲಿ ಇಂತಹ ಅತ್ಯಾಧುನಿಕ ಶಸ್ತ್ರ ಚಿಕಿತ್ಸಾ ಘಟಕಗಳನ್ನು ಸ್ಥಾಪಿಸಲಾಗುವುದು.

ಆನಂತರದ ದಿನಗಳಲ್ಲಿ ಸರ್ಕಾರಿ ವೈದ್ಯಕೀಯ ಆಸ್ಪತ್ರೆಗಳಿರುವ ಜಿಲ್ಲೆಗಳ ಜಿಲ್ಲಾಸ್ಪತ್ರೆಗಳಲ್ಲಿ ಇಂತಹ ಶಸ್ತ್ರ ಚಿಕಿತ್ಸಾ ಘಟಕವನ್ನು ಪ್ರಾರಂಭಿಸಲಾಗುವುದು.

ಇದರ ವಿಶೇಷವೆಂದರೆ ಉಳಿದ ಆಪರೇಷನ್ ಥಿಯೇಟರ್‍ಗಳಲ್ಲಿ ನಾಲ್ಕು ಅಥವಾ ಐದು ಶಸ್ತ್ರ ಚಿಕಿತ್ಸೆಗಳನ್ನು ಒಟ್ಟಿಗೆ ಮಾಡಬಹುದು. ಆದರೆ, ಈ ಅತ್ಯಾಧುನಿಕ ಆಪರೇಷನ್ ಥಿಯೇಟರ್‍ಗಳಲ್ಲಿ ಹದಿನೈದರಿಂದ ಇಪ್ಪತ್ತು ಶಸ್ತ್ರ ಚಿಕಿತ್ಸೆಗಳನ್ನು ನಡೆಸಬಹುದು.

ಅನಸ್ತೇಸಿಯಾ ವಿಭಾಗದಿಂದ ಹಿಡಿದು ವಿಶೇಷ ಏರ್ ಕಂಡೀಷನ್ ವ್ಯವಸ್ಥೆಯ ತನಕ, ಇಷ್ಟೊಂದು ಶಸ್ತ್ರ ಚಿಕಿತ್ಸೆಗಳನ್ನು ನಡೆಸಲು ಅನುಕೂಲವಾಗುವ ಜಾಗದ ವ್ಯವಸ್ಥೆಯಿಂದ ಹಿಡಿದು ಹೆಚ್ಚುವರಿ ವೈದ್ಯರ ತಂಡಗಳನ್ನು ಇಲ್ಲಿಗೆ ಒದಗಿಸಲಾಗುತ್ತದೆ.

ಇದೇ ಮೂಲಗಳ ಪ್ರಕಾರ ಮೆಡಿಕಲ್ ಕಾಲೇಜುಗಳಿರುವ ಜಿಲ್ಲೆಗಳ ಮುಖ್ಯ ಆಸ್ಪತ್ರೆಯ ಹಾಸಿಗೆಗಳ ಸಾಮಥ್ರ್ಯವನ್ನು 400 ರಿಂದ 650 ಕ್ಕೆ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದ್ದು ಈಗಾಗಲೇ ನಾಲ್ಕು ಜಿಲ್ಲಾಸ್ಪತ್ರೆಗಳಲ್ಲಿ ಈ ಹಾಸಿಗೆ ಹೆಚ್ಚಳದ ಸಾಮಥ್ರ್ಯವನ್ನು ಹೆಚ್ಚಳ ಮಾಡುವ ಕೆಲಸ ನಡೆದಿದೆ.

ಆನಂತರದ ದಿನಗಳಲ್ಲಿ ಹಂತ ಹಂತವಾಗಿ ಉಳಿದ ಮೆಡಿಕಲ್ ಆಸ್ಪತ್ರೆಗಳಿಗೆ ಹೊಂದಿಕೊಂಡಿರುವ ಜಿಲ್ಲಾ ಆಸ್ಪತ್ರೆಗಳಿಗೂ ಈ ಸೌಲಭ್ಯವನ್ನು ವಿಸ್ತರಿಸಲು ತೀರ್ಮಾನಿಸಲಾಗಿದೆ.

ಜಯದೇವ ಹೃದ್ರೋಗ ಆಸ್ಪತ್ರೆಯ ಘಟಕವನ್ನು ಮೈಸೂರಿನಲ್ಲಿ ಆರಂಭಿಸಿದ ಹಾಗೆ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಘಟಕಗಳನ್ನು ಮೈಸೂರು,ಹುಬ್ಬಳ್ಳಿಯಲ್ಲಿ ಆರಂಭಿಸಲಾಗಿದ್ದು ಇದೇ ರೀತಿ ಗುಲ್ಬರ್ಗ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲೂ ಕಿದ್ವಾಯಿ ಆಸ್ಪತ್ರೆಯ ಘಟಕಗಳನ್ನು ಸ್ಥಾಪಿಸಲಾಗುವುದು.

ಇನ್‍ಪೋಸಿಸ್ ನೆರವಿನೊಂದಿಗೆ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ ಕಟ್ಟಡವನ್ನು ವಿಸ್ತರಿಸಲಾಗಿದೆ ಎಂದಿರುವ ಮೂಲಗಳು, ಇಷ್ಟಾದರೂ ಕ್ಯಾನ್ಸರ್ ರೋಗಿಗಳ ಪ್ರಮಾಣ ಹೆಚ್ಚುತ್ತಲೇ ಇದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಕಿದ್ವಾಯಿ ಆಸ್ಪತ್ರೆಯ ಘಟಕಗಳನ್ನು ತೆರೆದು ರೋಗಿಗಳಿಗೆ ಅನುಕೂಲ ಮಾಡಿಕೊಡುವುದು ಸರ್ಕಾರದ ಉದ್ದೇಶ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ