ಬೆಂಗಳೂರು, ಜೂ.23-ನಗರದಲ್ಲಿ ಯಾರೂ ಕೂಡಾ ಪ್ಲಾಸ್ಟಿಕ್ ಕವರ್ ಸೇರಿದಂತೆ ಕಳಪೆ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಕೆ ಮಾಡಬಾರದು ಎಂದು ಶಾಸಕಿ ಸೌಮ್ಯರೆಡ್ಡಿ ಮನವಿ ಮಾಡಿದರು.
ದೇಶದಲ್ಲೇ ಅತಿ ದೊಡ್ಡ ಕೊಂಡು-ಕೊಳ್ಳುವ ಸಂಕೀರ್ಣ ಎಂದೇ ಹೆಸರಾಗಿರುವ ಜಯನಗರದಲ್ಲಿ ನಿರ್ಮಾಣವಾಗಿರುವ ನೂತನ ವಿಶ್ವೇಶ್ವರಯ್ಯ ಸಂಕೀರ್ಣವನ್ನು ಉದ್ಘಾಟಿಸಿ, ಮಳಿಗೆಗಳನ್ನು ವೀಕ್ಷಿಸಿ ನಂತರ ಸೌಮ್ಯರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನಗರವನ್ನು ಪ್ಲಾಸ್ಟಿಕ್ ಮುಕ್ತ ಮಾಡಬೇಕಿದೆ. ಈಗಾಗಲೇ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಕವರ್ ಹಾಗೂ ವಸ್ತುಗಳನ್ನು ಬಳಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ.ಆದ್ದರಿಂದ ಸಾರ್ವಜನಿಕರು ಪ್ಲಾಸ್ಟಿಕ್ ಕವರ್ ಹಾಗೂ ವಸ್ತುಗಳನ್ನು ಬಳಸಬಾರದೆಂದು ಮನವಿ ಮಾಡಿದರು.
ನಾಗರಿಕರು ಅಂಗಡಿಗಳಲ್ಲಿ ಸಾಮಾನು ಕೊಂಡು ತರುವಾಗ ಆದಷ್ಟು ಬಟ್ಟೆ ಬ್ಯಾಗ್ ಅಥವಾ ಪೇಪರ್ ಬ್ಯಾಗ್ಗಳನ್ನು ಬಳಸಬೇಕೆಂದು ಸಲಹೆ ನೀಡಿದರು.
ಬಿಬಿಎಂಪಿ ಭೆರಸಂದ್ರ ವಾರ್ಡ್ ಸದಸ್ಯ ಎನ್.ನಾಗರಾಜ್ ಮಾತನಾಡಿ, ವರ್ತಕರಿಗೆ ಮಾರಾಟ ಮಾಡಲು ಹಳೇ ಕಟ್ಟಡದಿಂದ ಹೊಸದಾಗಿ ನಿರ್ಮಾಣ ಮಾಡಿರುವ ವಿಶ್ವೇಶ್ವರಯ್ಯ ಸಂಕೀರ್ಣದಲ್ಲಿ ಹೂ, ತರಕಾರಿ, ಬಟ್ಟೆ ಸೇರಿದಂತೆ ಸುಮಾರು 150 ಹೊಸ ಮಳಿಗೆಗಳನ್ನು ನಿರ್ಮಿಸಲಾಗಿದೆ. ಶೇ.80ರಷ್ಟು ಮಳಿಗೆಗಳು ಹೊಸ ಕಟ್ಟಡಕ್ಕೆ ವರ್ಗಾವಣೆಗೊಂಡಿವೆ. ಉಳಿದವು ಕೆಲವೇ ದಿನಗಳಲ್ಲಿ ಇಲ್ಲಿಗೆ ಆಗಮಿಸಲಿವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಸಕಿ ಸೌಮ್ಯರೆಡ್ಡಿ ಹಾಗೂ ನಾಗರಾಜ್ ಹೊಸದಾಗಿ ಆರಂಭವಾಗಿರುವ ಮಳಿಗೆಗಳಲ್ಲಿ ಶಾಪಿಂಗ್ ಮಾಡುವ ಮೂಲಕ ಗಮನ ಸೆಳೆದರು. ಇಲ್ಲಿ ವಿಶೇಷವಾಗಿ ರಿಯಾಯ್ತಿ ದರದಲ್ಲಿ ವಸ್ತುಗಳು ಲಭ್ಯವಿದ್ದು, ಗ್ರಾಹಕರು ಇಲ್ಲೇ ಕೊಳ್ಳುವಂತೆ ಕರೆ ನೀಡಿದರು.
ಮಳಿಗೆಗೆ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಶನಿವಾರ-ಭಾನುವಾರ ಸಂಜೆ 5 ರಿಂದ 8 ಗಂಟೆಯವರೆಗೆ ಜಾನಪದ ಕಲಾತಂಡಗಳಿಂದ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.