ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್-ವೈದ್ಯರಿಂದ ಯಶಸ್ವಿ ಬ್ರೈನ್ ಟ್ಯೂಮರ್ ಚಿಕಿತ್ಸೆ

ಬೆಂಗಳೂರು, ಜೂ.23- ಉಗಾಂಡದ ಪ್ರಜೆ ನೆಲ್ಸನ್ ಡಗ್ಲಾಸ್ ಅವರಿಗೆ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್‍ನಲ್ಲಿ ವೈದ್ಯರು ಯಶಸ್ವಿಯಾಗಿ ಬ್ರೈನ್ ಟ್ಯೂಮರ್ ಚಿಕಿತ್ಸೆ ನೀಡಿದ್ದು, ಗುಣಮುಖರಾಗಿರುವ ಅವರು, ಆಸ್ಪತ್ರೆಯಲ್ಲಿ ಬ್ರೈನ್ ಟ್ಯೂಮರ್- ಮುಕ್ತ ವರ್ಷವನ್ನು ಸಂಭ್ರಮದಿಂದ ಆಚರಿಸಿಕೊಂಡರು.

ನೆಲ್ಸನ್ ಡಗ್ಲಾಸ್ ಅವರಿಗೆ 2013 ರಲ್ಲಿ ಬ್ರೈನ್ ಟ್ಯೂಮರ್ ಚಿಕಿತ್ಸೆಯನ್ನು ಯಶಸ್ವಿಯಾಗಿ ನೀಡಲಾಗಿತ್ತು. ನೆಲ್ಸನ್ ಕಾರ್ಯನಿರತ ಬ್ಯುಸಿನೆಸ್‍ಮ್ಯಾನ್ ಆಗಿದ್ದು, ಕಟ್ಟಾ ಮ್ಯಾರಥಾನ್ ರನ್ನರ್ ಕೂಡ ಆಗಿದ್ದಾರೆ. ತಮ್ಮ 37 ನೇ ವರ್ಷದಲ್ಲಿ ನೆಲ್ಸನ್ ಅವರು ಪದೇಪದೇ ಬರುತ್ತಿದ್ದ ತಲೆನೋವಿನಿಂದ ಮತ್ತು ತಲೆ ಸುತ್ತಿನಿಂದ ಬಳಲುತ್ತಿದ್ದರು. ಉಗಾಂಡದಲ್ಲಿ ಅವರಿಗೆ ಆರಂಭಿಕವಾಗಿ ಚಿಕಿತ್ಸೆ ನೀಡಲಾಗಿತ್ತು.ಆದರೂ ಖಾಯಿಲೆ ಮುಂದುವರೆದಿತ್ತು.

ಅವರು ವೈದ್ಯರ ಸಲಹೆಯಂತೆ ಮಿದುಳಿನ ಎಂಆರ್‍ಐ ಸ್ಕ್ಯಾನ್ ಮಾಡಿಸಿದಾಗ ಅವರ ಮಿದುಳಿನ ಬಲಕ್ಕಿರುವ ನಿರ್ಣಾಯಕ ಭಾಗದಲ್ಲಿ ದೊಡ್ಡದಾದ ಗಡ್ಡೆ ಇರುವುದು ಪತ್ತೆಯಾಗಿತ್ತು.

2013 ರಲ್ಲಿ ಅವರು ಬೆಂಗಳೂರಿನ ಬಿಜಿಎಸ್ ಗ್ಲೆನಿಗಲ್ಸ್ ಹಾಸ್ಪಿಟಲ್‍ನ ವೈದ್ಯರನ್ನು ಸಂಪರ್ಕಿಸಿ ಇಲ್ಲಿಗೆ ಆಗಮಿಸಿದರು. ದೀರ್ಘಾವಧಿಯಲ್ಲಿ ಮಿದುಳಿಗೆ ಯಾವುದೇ ಹಾನಿ ಸಂಭವಿಸದ ರೀತಿಯಲ್ಲಿ ಗಡ್ಡೆಯನ್ನು ತೆಗೆಯಲಾಗಿತ್ತು.

ನೆಲ್ಸನ್ ಅವರು ಶಸ್ತ್ರಚಿಕಿತ್ಸೆ ನಂತರ ಯಾವುದೇ ಸಮಸ್ಯೆಗಳಿಲ್ಲದೇ ಚೇತರಿಸಿಕೊಂಡಿದ್ದಾರೆ. ಗಡ್ಡೆ ಮರುಕಳಿಸುವುದನ್ನು ತಡೆಯುವ ಸಲುವಾಗಿ ಅವರಿಗೆ ಕಿಮೋಥೆರಪಿ, ರೇಡಿಯೇಶನ್ ಚಿಕಿತ್ಸೆಯನ್ನೂ ನೀಡಲಾಗಿತ್ತು ಎಂದು ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್‍ನ ಸೀನಿಯರ್‍ಕನ್ಸಲ್ಟೆಂಟ್ ಆಂಕಾಲಾಜಿ ಡಾ.ಮಾತಂಗಿ ಜೆ. ಹೇಳಿದರು.

ರೇಡಿಯೇಶನ್‍ನಲ್ಲಿನ ತಾಂತ್ರಿಕ ಸುಧಾರಣೆಗಳು ಸಂಯೋಜಿತ ಎಂಆರ್‍ಐ ಸ್ಕ್ಯಾನ್‍ಗಳನ್ನು ನೇರವಾಗಿ ಚಿಕಿತ್ಸಾ ಯೋಜನೆ ವ್ಯವಸ್ಥೆಗೆ ತಂದುಕೊಳ್ಳಲು ನೆರವಾದವು ಎಂದು ಅವರು ತಿಳಿಸಿದರು.

ನೆಲ್ಸನ್ ಡಗ್ಲಾಸ್ ಮಾತನಾಡಿ, ಈಗ ನಾನು ಸಂಪೂರ್ಣ ಗುಣಮುಖನಾಗಿದ್ದು, ಪ್ರತಿವರ್ಷ ಬ್ರೈನ್ ಟ್ಯೂಮರ್ ಮುಕ್ತ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದೇನೆ. ನನಗೆ ರೋಗ ಪತ್ತೆಯಾಗಿ ಚಿಕಿತ್ಸೆ ಪಡೆದುಕೊಂಡ ಆರನೇ ವರ್ಷ ಇದಾಗಿದೆ. ಹಾಗಾಗಿ ನಾನು ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್‍ನ ಅದ್ಭುತ ವೈದ್ಯಕೀಯ ಸಿಬ್ಬಂದಿಯೊಂದಿಗೆ ಆರನೇ ವರ್ಷವನ್ನು ಆಚರಿಸಿಕೊಳ್ಳುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ