ಕನ್ನಡ ಸಾಹಿತ್ಯವನ್ನು ಓದಿ ಅಪ್ಪಿಕೊಳ್ಳಬೇಕಾದ ಔದಾರ್ಯತೆ ನಮ್ಮದಾಗಬೇಕು

ಬೆಂಗಳೂರು, ಜೂ.23-ಕನ್ನಡ ಸಾಹಿತ್ಯದ ಪರಂಪರೆ ಅತ್ಯಂತ ಉಜ್ವಲ ಹಾಗೂ ಶ್ರೇಷ್ಠವೂ ಆಗಿದ್ದು, ಈ ಎಲ್ಲವನ್ನೂ ಓದಿ ಅರಗಿಸಿಕೊಳ್ಳುವಂತಹ ಸಹೃದಯತೆ ನಮ್ಮದಾಗಬೇಕಾಗಿದೆ ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಯದೇವ್ ಹೇಳಿದರು.

ವಿವೇಕಾನಂದ ಆದರ್ಶ ಸಾಧನಾ ಕೇಂದ್ರದಲ್ಲಿ ಕವಿ ಕೃಷ್ಣಪ್ರಸಾದ್ ರಚಿಸಿರುವ ಗೀತೆಯ ಬೆಳಕು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಎಂಟು ಜ್ಞಾನ ಪೀಠ ಸಾಹಿತ್ಯ ಪುರಸ್ಕಾರ ಪಡೆದ ಪುಣ್ಯ ಭೂಮಿ ನಮ್ಮದು. ಇಂತಹ ಕನ್ನಡ ಸಾಹಿತ್ಯವನ್ನು ಓದಿ ಅಪ್ಪಿಕೊಳ್ಳಬೇಕಾದ ಔದಾರ್ಯತೆ ನಮ್ಮದಾಗಬೇಕಾಗಿದೆ. ಕನ್ನಡ ವನ್ನು ಪ್ರೀತಿಸುತ್ತಾ ಕನ್ನಡವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.

ಕವಿ ಕೃಷ್ಣಪ್ರಸಾದ್ ಮಾತನಾಡಿ, ಗೀತೆಯ ಬೆಳಕು ಪುಸ್ತಕ ಇವತ್ತು ನಿಮ್ಮ ಕೈ ಸೇರಿದೆ ಅಂದರೆ ಅದಕ್ಕೆ ಪ್ರೇರಣೆ ವಾಸ್ಕ್ ಯೋಗ ಕೇಂದ್ರದ ಯೋಗಗುರು ಉಮಾಮಹೇಶ್ವರ ಅವರು. ಅಂದು ನಾನು ಫೇಸ್‍ಬುಕ್ ನಲ್ಲಿ ಟೈಂ ಪಾಸ್ ಮಾಡಲು ಬರೆಯುತ್ತಿದ್ದೆ, ಅದನ್ನು ಗಮನಿಸಿ ನನಗೆ ಧೈರ್ಯ ತುಂಬಿದ ಪರಿಣಾಮ ನಾನು ಪುಸ್ತಕ ಬರೆದಿದ್ದೇನೆ ಎಂದರು.

ಈ ವೇಳೆ ನಡೆದ ಸಾಹಿತ್ಯ ಭಾರತ ಕವಿಗೋಷ್ಟಿ ಕಾರ್ಯಕ್ರಮದಲ್ಲಿ ನೂರಾರು ಕವಿಗಳು ತಮ್ಮ ಕವನಗಳನ್ನು ವಾಚಿಸಿದರು.

ಉಮಾಮಹೇಶ್ವರ, ಕವಿ ಕೃಷ್ಣ ಪ್ರಸಾದ್, ವೈಬಿಎಚ್ ಜಯದೇವ್ ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ