ಬೆಂಗಳೂರು,ಜೂ.19-ಐಎಂಎ ಕಂಪನಿಯಮುಖ್ಯಸ್ಥ ಮೊಹಮ್ಮದ್ ಮನ್ಸೂರ್ ಖಾನ್ ಎಲ್ಲೆಲ್ಲಿ ಆಸ್ತಿ ಮಾಡಿದ್ದಾನೆ ಮತ್ತು ಬಂಡವಾಳ ಹೂಡಿಕೆ ಎಲ್ಲಿ ಮಾಡಿದ್ದಾನೆ ಎಂಬುದರ ಬಗ್ಗೆ ಎಸ್ಐಟಿ ತೀವ್ರ ಶೋಧ ನಡೆಸುತ್ತಿದೆ.
ಎಸ್ಐಟಿಯ ಒಂದು ತಂಡ ಬೆಂಗಳೂರು ನಗರ ಮತ್ತು ಹೊರವಲಯದಲ್ಲಿ ಮತ್ತೊಂದು ತಂಡ ರಾಜ್ಯದ ವಿವಿಧ ಜಿಲ್ಲೆ ಹಾಗೂ ಹೊರರಾಜ್ಯಗಳಲ್ಲಿ ತಪಾಸಣೆ ನಡೆಸುತ್ತಿದೆ.
ಖಾನ್ಗೆ ಸೇರಿದ್ದವು ಎನ್ನಲಾದ ವಾಣಿಜ್ಯ ಕಟ್ಟಡಗಳು, ಜಮೀನು, ಸ್ಕೂಲ್ ಪ್ರಾಪರ್ಟಿ, ಅಪಾರ್ಟ್ಮೆಂಟ್ ಇತ್ಯಾದಿ ಸೇರಿ ಒಟ್ಟು 26 ಚಿರಾಸ್ತಿಗಳನ್ನು ಈಗಾಗಲೇ ಎಸ್ಐಟಿ ಗುರುತಿಸಿದೆ.
ವಿಚ್ಛೇಧಿತ ಮೂರನೇ ಪತ್ನಿಯ ಮನೆ ಹಾಗೂ ಜಯನಗರದಲ್ಲಿನ ಐಎಂಎ ಜ್ಯುವೆಲರಿ ಕಚೇರಿ ಮೇಲೆ ಈಗಾಗಲೇ ದಾಳಿ ನಡೆಸಿರುವ ಎಸ್ಐಟಿ ಒಟ್ಟು 33 ಕೋಟಿ ಬೆಲೆಯ ಚಿನ್ನ, ವಜ್ರ, ಬೆಳ್ಳಿ ಆಭರಣಗಳನ್ನು ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಖಾನ್ನ ಸಂಬಂಧಿಗಳು , ಕಂಪನಿಯ ನಿರ್ದೇಶಕರುಗಳು, ಜ್ಯುವೆಲರ್ಸ್ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ನೌಕರರನ್ನು ವಿಚಾರಣೆಗೊಳಪಡಿಸಿರುವ ಎಸ್ಐಟಿ ಈ ಬಗ್ಗೆ ಕೆಲವು ಮಹತ್ವದ ಮಾಹಿತಿಗಳನ್ನು ಪಡೆದುಕೊಂಡಿದೆ.
ಬಂಡವಾಳ ಹೂಡಿಕೆ ಹಾಗೂ ಆಸ್ತಿಯ ವಿಚಾರಗಳ ಬಗ್ಗೆ ಕೆಲವು ವ್ಯಕ್ತಿಗಳು ಗೌಪ್ಯವಾಗಿ ಎಸ್ಐಟಿಗೆ ಮಾಹಿತಿಯನ್ನು ನೀಡಿದ್ದಾರೆ. ಆ ಮಾಹಿತಿಗಳನ್ನು ಸಹ ಎಸ್ಐಟಿ ಪರಿಶೀಲಿಸುತ್ತಿದೆ.
ಈ ನಡುವೆ ದುಬೈನಲ್ಲಿ ಅಡಗಿ ಕುಳಿತಿರುವ ಖಾನ್ನನ್ನು ಬೆಂಗಳೂರಿಗೆ ಕರೆತರಲು ಎಸ್ಐಟಿ ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಕೈಗೊಂಡಿದೆ.
ಈಗಾಗಲೇ ರಾಜ್ಯ ಸರ್ಕಾರ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳ ಜೊತೆ ಈ ಬಗ್ಗೆ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.