ನೀರಿನ ಟ್ಯಾಂಕ್ ದುರಂತವನ್ನು ತನಿಖೆ ನಡೆಸಲಾಗುವುದು-ಡಿಸಿಎಂ ಪರಮೇಶ್ವರ್

ಬೆಂಗಳೂರು,ಜೂ.19-ತ್ಯಾಜ್ಯ ನೀರು ಸಂಸ್ಕರಣಾ ಘಟಕದ ನಿರ್ಮಾಣದ ವೇಳೆ ಸಂಭವಿಸಿರುವ ದುರಂತವನ್ನು ಭಾರತೀಯ ವಿಜ್ಞಾನ ಸಂಸ್ಥೆ, ಸಿಎಸ್‍ಐಆರ್ ಹಾಗೂ ಇಲಾಖೆಯ ಆಂತರಿಕ ಸಮಿತಿಯಿಂದ ತನಿಖೆಗೊಳಪಡಿಸುವುದಾಗಿ ಉಪಮುಖ್ಯಮಂತ್ರಿ ಪರಮೇಶ್ವರ್ ತಿಳಿಸಿದರು.

ಇಂದು ಬೆಳಗ್ಗೆ ಹೆಬ್ಬಾಳದ ಬಳಿ ನಿರ್ಮಾಣಗೊಳ್ಳುತ್ತಿರುವ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ದುರಂತದಲ್ಲಿ ಮೂರು ಮಂದಿ ಇಂಜಿನಿಯರ್‍ಗಳು ಮೃತಪಟ್ಟಿರುವುದಕ್ಕೆ ಶೋಕ ವ್ಯಕ್ತಪಡಿಸಿದರು. ಅವರ ಕುಟುಂಬ ವರ್ಗಕ್ಕೆ ದುಃಖಭರಿಸುವ ಶಕ್ತಿ ಬರಲಿ ಎಂದರಲ್ಲದೆ ಸರ್ಕಾರದಿಂದ ಪರಿಹಾರ ಕೊಡಿಸುವ ಬಗ್ಗೆ ಚರ್ಚೆ ನಡೆಸುವುದಾಗಿ ಹೇಳಿದರು.

ಘಟನೆಯ ಬಗ್ಗೆ ಬಿಡಬ್ಲ್ಯು ಎಸ್‍ಎಸ್‍ಬಿ ಅಧ್ಯಕ್ಷರು ಈಗಾಗಲೇ ತನಿಖೆಗೆ ಆದೇಶಿಸಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಚೆನ್ನೈನಲ್ಲಿರುವ ಕೇಂದ್ರ ಸರ್ಕಾರದ ಕೌನ್ಸಿಲ್ ಆಫ್ ಸೈಂಟಿಫಿಕ್ ಇಂಡಸ್ಟ್ರೀಯಲ್ ರಿಸರ್ಚ್(ಸಿಎಸ್‍ಐಆರ್) ಸಂಸ್ಥೆಯಿಂದ ತನಿಖೆ ನಡೆಸಲಾಗುವುದು. ಜೊತೆಗೆ ನಿರ್ಮಾಣ ಸಂದರ್ಭದಲ್ಲಿ ಎಷ್ಟು ಜನ ಇಂಜಿನಿಯರ್‍ಗಳು ಸ್ಥಳದಲ್ಲಿ ಇರಬೇಕಿತ್ತು, ಯಾರೆಲ್ಲ ಇರಲಿಲ್ಲ, ಇದ್ದವರು ಏಕೆ ಮುಂಜಾಗ್ರತ ಕ್ರಮ ತೆಗೆದುಕೊಳ್ಳಲಿಲ್ಲ, ಕಬ್ಬಿಣವನ್ನು ಸರಿಯಾಗಿ ಹಾಕಲಾಗಿತ್ತೆ, ಯಾವ ಕಾರಣಕ್ಕಾಗಿ ಕಾಂಕ್ರೀಟ್ ವೇದಿಕೆ ಕುಸಿದಿದೆ ಎಂಬ ವಿಷಯಗಳ ಕುರಿತು ತನಿಖೆ ನಡೆಸಲಾಗುತ್ತದೆ. ತನಿಖೆ ನಂತರವಷ್ಟೇ ದುರಂತದ ಬಗ್ಗೆ ಮಾಹಿತಿ ನೀಡಲು ಸಾಧ್ಯ ಎಂದು ಹೇಳಿದರು.

ಬೆಂಗಳೂರಿನಲ್ಲಿ ಪ್ರತಿದಿನ 2500 ಎಂಎಲ್‍ಡಿ ನೀರು ಬಳಕೆಯಾಗುತ್ತಿದೆ. ಅದರಲ್ಲಿ 1400 ಎಂಎಲ್‍ಡಿ ಕಾವೇರಿಯಿಂದ, 700 ಎಂಎಲ್‍ಡಿ ಬೋರ್‍ವೆಲ್‍ನಿಂದ ಪೂರೈಕೆಯಾಗುತ್ತಿದೆ. ನೀರು ಕಡಿಮೆಯಾದಂತೆಲ್ಲ ನಾವು ಪರ್ಯಾಯ ಕ್ರಮಗಳ ಬಗ್ಗೆ ಯೋಚಿಸುತ್ತಿದ್ದೇವೆ. ಈಗಾಗಲೇ ಬೆಳ್ಳಂದೂರು ಬಳಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಮಾಡಿ ಸಂಸ್ಕರಿಸಿದ ನೀರನ್ನು ಕೆಸಿವ್ಯಾಲಿ ಮೂಲಕ ಕೋಲಾರಕ್ಕೆ ಹರಿಸಲಾಗುತ್ತಿದೆ.

ಹೆಬ್ಬಾಳದಲ್ಲಿ 2ನೇ ಅತಿದೊಡ್ಡ ಘಟಕ ನಿರ್ಮಾಣಗೊಳ್ಳುತ್ತಿದ್ದು, ಇಲ್ಲಿ ಸಂಸ್ಕರಿಸಿದ ನೀರನ್ನು ಚಿಕ್ಕಬಳ್ಳಾಪುರಕ್ಕೆ ಹರಿಸುವ ಉದ್ದೇಶವಿದೆ. 365 ಕೋಟಿ ರೂ.ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಇನ್ನು ನಾಲ್ಕು ಡೈಜೆಸ್ಟರ್‍ಗಳ ನಿರ್ಮಾಣವಾಗಬೇಕು, ತ್ಯಾಜ್ಯದೊಂದಿಗೆ ಬರುವ ಸ್ಲರಿಯನ್ನು ಸಂಸ್ಕರಿಸಿ ಜೈವಿಕ ಅನಿಲ ಉತ್ಪಾದಿಸುವ ಡೈಜೆಸ್ಟರ್‍ಗಳ ನಿರ್ಮಾಣದ ವೇಳೆ ದುರಂತ ಸಂಭವಿಸಿದೆ. ನಿರ್ಮಾಣದ ಗುತ್ತಿಗೆಯನ್ನು ಎನ್‍ವಿರೋ ಕಂಟ್ರೋಲ್ ಅಸೋಸಿಯೇಷನ್ ಪಡೆದಿದೆ. ಇನ್ನು ಮುಂದೆ ಇಂತಹ ದುರಂತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲಾಗುವುದು. ಅಗತ್ಯ ಕ್ರಮಗಳನ್ನು ಕೈಗೊಂಡು ಕಾಮಗಾರಿ ಮುಂದುವರೆಸ ಲಾಗುವುದು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ