ಬೆಂಗಳೂರು, ಜೂ.18-ಮೊದಲ ಹಂತದಲ್ಲಿ 11 ಮಂದಿ, ಎರಡನೇ ಹಂತದಲ್ಲಿ 7 ಮಂದಿ ಆಡಳಿತ ಪಕ್ಷದ ಶಾಸಕರಿಂದ ರಾಜೀನಾಮೆ ಕೊಡಿಸಿ ಸಮ್ಮಿಶ್ರ ಸರ್ಕಾರಕ್ಕೆ ಖೆಡ್ಡ ತೋಡುವ ಕಾರ್ಯತಂತ್ರದ ಬಗ್ಗೆ ತೆರೆಮರೆಯಲ್ಲಿ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿ ಕಾಂಗ್ರೆಸ್ ಅತೃಪ್ತ ಶಾಸಕರು ರಹಸ್ಯ ಸಭೆ ನಡೆಸಿ ಕುತೂಹಲ ಕೆರಳಿಸಿದ್ದಾರೆ.
ಚಿಕ್ಕಬಳ್ಳಾಪುರ ಕ್ಷೇತ್ರದ ಡಾ.ಕೆ.ಸುಧಾಕರ್, ಬಳ್ಳಾರಿಯ ನಾಗೇಂದ್ರ ಸೇರಿದಂತೆ ಕೆಲವು ಶಾಸಕರು ದೆಹಲಿಯಲ್ಲಿ ಬಿಜೆಪಿ ನಾಯಕರ ಜೊತೆ ಸಮಾಲೋಚನೆ ನಡೆಸಿದ್ದು, ಆಪರೇಷನ್ ಕಮಲವನ್ನು ತೀವ್ರಗೊಳಿಸಲು ಮುಂದಾಗಿದ್ದಾರೆ. ಈಗಾಗಲೇ ದೆಹಲಿಯಲ್ಲಿ ನಡೆದಿರುವ ಮಾತುಕತೆಯ ಅನುಸಾರ ಮೊದಲ ಹಂತದಲ್ಲಿ 11 ಮಂದಿ, ಎರಡನೇ ಹಂತದಲ್ಲಿ 7 ಮಂದಿ ಶಾಸಕರು ರಾಜೀನಾಮೆ ನೀಡುವ ಯೋಜನೆ ಸಿದ್ಧಗೊಂಡಿದೆ.
ಮೊದಲ ಹಂತದಲ್ಲಿ ರಾಜೀನಾಮೆ ನೀಡುತ್ತಿದ್ದಂತೆ ಸಮ್ಮಿಶ್ರ ಸರ್ಕಾರ ಸಂಖ್ಯಾಬಲ ಕಳೆದುಕೊಳ್ಳುತ್ತದೆ. ಎರಡನೇ ಹಂತದಲ್ಲಿ ಇನ್ನಷ್ಟು ಶಾಸಕರನ್ನು ರಾಜೀನಾಮೆ ಕೊಡಿಸುವ ಮೂಲಕ ಮತ್ತೊಮ್ಮೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಸಾಧ್ಯವೇ ಆಗದಂತಹ ಪರಿಸ್ಥಿತಿ ನಿರ್ಮಿಸಲು ಬಿಜೆಪಿ ರಣವ್ಯೂಹ ರಚಿಸಿದೆ.
ಆದರೆ ಇದರ ಸುಳಿವು ಸಿಗದಂತೆ ಮಾಡಲು ಬೆಂಗಳೂರಿನಲ್ಲಿ ಬಿಜೆಪಿ ನಾಯಕರು ಹಗಲಿರುಳು ಧರಣಿ ನಡೆಸಿ ಗಮನವನ್ನು ಬೇರೆಡೆ ಸೆಳೆದಿದ್ದರು. ಈ ಹಂತದಲ್ಲೇ ಕಾಂಗ್ರೆಸ್ನ ಅತೃಪ್ತ ಶಾಸಕರು ದೆಹಲಿಯಲ್ಲಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ ಎಲ್ಲಾ ಅತೃಪ್ತ ಶಾಸಕರನ್ನು ಸಂಪರ್ಕಿಸಲಾಗಿದೆ. ಸಂಪುಟದಲ್ಲಿ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಶಾಸಕರು ಅತೃಪ್ತರ ಬಣದಲ್ಲಿ ಗುರುತಿಸಿಕೊಳ್ಳಲು ಧೈರ್ಯವಾಗಿ ಮುಂದಾಗುತ್ತಿದ್ದಾರೆ ಎನ್ನಲಾಗಿದೆ.
ಇಂದು ಬೆಳಗ್ಗೆ ಬೆಂಗಳೂರಿನಲ್ಲಿರುವ ಶಾಸಕ ಬಿ.ಸಿ.ಪಾಟೀಲ್ ಅವರ ಮನೆಯಲ್ಲಿ ಶಾಸಕರಾದ ಸುಧಾಕರ್, ಕಂಪ್ಲಿ ಗಣೇಶ್ ಹಾಗೂ ಮತ್ತಿತರರು ಸಭೆ ಸೇರಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಬಿಜೆಪಿ ಹೈಕಮಾಂಡ್ ಆಪರೇಷನ್ ಕಮಲಕ್ಕೆ ಹಸಿರು ನಿಶಾನೆ ತೋರಿಸದೆ ಇರುವುದರಿಂದ ಕಾಂಗ್ರೆಸ್ನ ಅತೃಪ್ತರು ತಳಮಳಗೊಂಡಿದ್ದಾರೆ. ಒಂದು ವೇಳೆ ಬಿಜೆಪಿ ಹಸಿರು ನಿಶಾನೆ ತೋರಿಸಿದ್ದೇ ಆದರೆ ತಕ್ಷಣವೇ ಸರದಿ ಸಾಲಿನಲ್ಲಿ ನಿಂತು ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ನೀಡಲು ಸಿದ್ಧರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಟ್ಟು 18 ಮಂದಿ ಶಾಸಕರು 4 ಮಂದಿ ಜೆಡಿಎಸ್ನವರೂ ಸೇರಿದ್ದಾರೆ ಎಂಬುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.