ರಾಜ್ಯ ಕಾಂಗ್ರೇಸ್‍ನ ಪ್ರಮುಖ ನಾಯಕರ ದೆಹಲಿಯಾತ್ರೆ-ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ

ಬೆಂಗಳೂರು, ಜೂ.18-ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರು ಇದ್ದಕ್ಕಿದ್ದಂತೆ ದೆಹಲಿಯಾತ್ರೆ ಕೈಗೊಂಡಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಪರಮೇಶ್ವರ್, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಎಚ್.ಕೆ.ಪಾಟೀಲ್ ಸೇರಿದಂತೆ ಹಲವಾರು ನಾಯಕರು ದೆಹಲಿಗೆ ಪ್ರವಾಸದಲ್ಲಿದ್ದು, ರಾಜಕೀಯ ಬೆಳವಣಿಗೆಗಳು ಚುರುಕುಗೊಂಡಿವೆ.

ಒಬ್ಬೊಬ್ಬ ನಾಯಕರ ಬಳಿಯೂ ಒಂದೊಂದು ಅಜೆಂಡಾಗಳಿದ್ದು, ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರನ್ನು ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆ ಬಳಿಕ ರಾಜಕೀಯ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್ ಬಳಿ ಚರ್ಚೆ ನಡೆಸಿದರೆ, ಸಮ್ಮಿಶ್ರ ಸರ್ಕಾರದ ವಿರುದ್ಧ ಕೆಲ ದೂರುಗಳನ್ನು ಹೇಳಲು ಮುಂದಾಗಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಮಾಜಿ ಪ್ರಧಾನಿ ದೇವೇಗೌಡರು, ರಾಹುಲ್‍ಗಾಂಧಿಯವರನ್ನು ಭೇಟಿ ಮಾಡಿ ಸಿದ್ದರಾಮಯ್ಯ ವಿರುದ್ಧ ದೂರುಗಳನ್ನು ನೀಡಿದ್ದರು. ಅದಕ್ಕೆ ಎಲ್ಲಾ ರೀತಿಯ ಸಮಜಾಯಿಷಿ ನೀಡಲು ಸಿದ್ದರಾಮಯ್ಯ ಇಂದು ರಾಹುಲ್‍ಅವರನ್ನು ಭೇಟಿಯಾಗುತ್ತಿದ್ದಾರೆ.

ಇನ್ನು ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯ ಸಾರಿರುವ ಮಾಜಿ ಸಚಿವ ಎಚ್.ಕೆ.ಪಾಟೀಲ್, ಜಿಂದಾಲ್ ಸಂಸ್ಥೆಗೆ ಭೂಮಿ ಹಂಚಿಕೆ ಸಂಬಂಧಪಟ್ಟಂತೆ ಸಮ್ಮಿಶ್ರ ಸರ್ಕಾರ ತೆಗೆದುಕೊಂಡಿರುವ ನಿಲುವುಗಳು, ಅದನ್ನು ಕಾಂಗ್ರೆಸ್ ಸಚಿವರು ಸಮರ್ಥಿಸಿಕೊಳ್ಳುತ್ತಿರುವ ರೀತಿ, ಐಎಂಎ ಹಗರಣ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಸಚಿವರು ಹಾಗೂ ಸರ್ಕಾರದ ವಿರುದ್ಧ ವರದಿ ನೀಡಲು ತೆರಳಿದ್ದಾರೆ.

ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು, ದಕ್ಷಿಣ ಭಾರತದ ಕಾಂಗ್ರೆಸ್ ಸಂಸದರಿಗೆ ದೆಹಲಿಯಲ್ಲಿ ಭೋಜನಕೂಟ ಏರ್ಪಡಿಸಿದ್ದು, ಕಾವೇರಿ, ಕೃಷ್ಣಾ, ಮಹದಾಯಿ ಮತ್ತಿತರ ನದಿ ವಿವಾದಗಳಲ್ಲಿ ಕರ್ನಾಟಕದ ಪರವಾಗಿ ನಿಲ್ಲಲು ಮನವಿ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಸರ್ಕಾರಿ ಕಾರ್ಯಕ್ರಮದ ನಿಮಿತ್ತವೇ ದೆಹಲಿಗೆ ತೆರಳಿದ್ದಾರೆ ಎಂದು ಹೇಳಲಾಗಿದ್ದರೂ ಅದರಲ್ಲೂ ಬೇರೆ ರೀತಿಯ ರಾಜಕೀಯ ವಾಸನೆ ಕಂಡುಬರುತ್ತಿದೆ.

ಒಟ್ಟಿನಲ್ಲಿ ಇತ್ತ ಸಮ್ಮಿಶ್ರ ಸರ್ಕಾರದ ವಿರುದ್ಧ ತೆರೆಮರೆಯಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು ಸದ್ದಿಲ್ಲದೆ ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಚರ್ಚೆ ನಡೆಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ