ಬೆಂಗಳೂರು, ಜೂ.15-ಜಿಂದಾಲ್ ಕಂಪನಿಗೆ ಭೂಮಿ ನೀಡಿದ ಪ್ರಕರಣವನ್ನು ಮರು ಪರಿಶೀಲನೆಗೆ ಒಳಪಡಿಸಲು ಸಂಪುಟ ಉಪಸಮಿತಿಗೆ ವಹಿಸಿರುವುದನ್ನು ಮಾಜಿ ಸಚಿವ ಎಚ್.ಕೆ.ಪಾಟೀಲ್ ಸ್ವಾಗತಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಜಿಂದಾಲ್ ಸಂಸ್ಥೆಗೆ ರಾಜ್ಯ ಸಮ್ಮಿಶ್ರಸರ್ಕಾರ 3600 ಎಕರೆಯನ್ನು ಮಾರಾಟ ಮಾಡಿದೆ. ಇದನ್ನು ಮೊದಲು ಪ್ರಶ್ನೆ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದು ಕಾಂಗ್ರೆಸ್ನ ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರು.
ಜಿಂದಾಲ್ ಸಂಸ್ಥೆ ಗಣಿಗಾರಿಕೆಯಲ್ಲಿ ನಡೆಸಿರುವ ಅಕ್ರಮಗಳ ಬಗ್ಗೆ ದಾಖಲಾತಿ ಬಿಡುಗಡೆ ಮಾಡಿ ಎಚ್.ಕೆ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದರು. ಆನಂತರ ಸಾರ್ವಜನಿಕ ವಲಯದಲ್ಲೂ ವ್ಯಾಪಕ ಟೀಕೆಗಳು, ಪ್ರತಿಭಟನೆಗಳು ನಡೆದವು.ಈ ಹಿನ್ನೆಲೆಯಲ್ಲಿ ಸರ್ಕಾರ ತನ್ನ ನಿರ್ಧಾರವನ್ನು ಮರು ಪರಿಶೀಲಿಸಲು ನಿರ್ಧರಿಸಿದೆ.
ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಿಂದಾಲ್ಗೆ ಭೂಮಿ ನೀಡುವ ನಿರ್ಧಾರಕ್ಕೆ ತಾತ್ಕಾಲಿಕ ತಡೆಹಿಡಿದು ಸಚಿವ ಸಂಪುಟ ಉಪಸಮಿತಿಯ ಮುಂದೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ತೀರ್ಮಾನಿಸಲಾಗಿದೆ. ಇದನ್ನು ಎಚ್.ಕೆ.ಪಾಟೀಲ್ ಸಮರ್ಥಿಸಿದ್ದಾರೆ.