ಠಾಣೆಗಳಿಗೆ ಹಿರಿಯರು ಬಂದಾಗ ಸಂಯಮದಿಂದ ವರ್ತಿಸಿ-ಡಿಸಿಪಿ ಎಂ.ಎನ್.ಅನುಚೇತ್

ಬೆಂಗಳೂರು, ಜೂ.15-ಹಿರಿಯರು ನಾಗರಿಕರು ಪೊಲೀಸ್ ಠಾಣೆಗೆ ಬಂದಂತಹ ಸಂದರ್ಭದಲ್ಲಿ ಅವರನ್ನು ಗೌರವದಿಂದ ಕಂಡು ಅವರ ದೂರುಗಳನ್ನು ಸಂಯಮದಿಂದ ಬಗೆಹರಿಸಬೇಕು ಎಂದು ಡಿಸಿಪಿ ಎಂ.ಎನ್.ಅನುಚೇತ್ ಸಲಹೆ ನೀಡಿದರು.

ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯರ ಶೋಷಣೆ ಜಾಗೃತೀಕರಣ ದಿನಾಚರಣೆ-2019 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮಗೂ ಮುಂದೊಂದು ದಿನ ವಯಸ್ಸಾಗುತ್ತದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಹಿರಿಯರನ್ನು ಗೌರವಿಸಬೇಕಿದೆ. ಸಮಸ್ಯೆಗಳಿಗೆ ಸಿಲುಕಿದ ಹಿರಿಯರು ಠಾಣೆಗಳಿಗೆ ಬಂದಾಗ ಸಂಯಮದಿಂದ ವರ್ತಿಸಿ. ಠಾಣೆಯ ಮಟ್ಟದಲ್ಲೇ ಸಾಧ್ಯವಾದರೆ ಬಗೆಹರಿಸಿ, ಇಲ್ಲವಾದರೆ ಹಿರಿಯರ ಸಹಾಯವಾಣಿ ಕೇಂದ್ರಕ್ಕೆ ಕಳುಹಿಸಿಕೊಡಿ ಎಂದು ಸಲಹೆ ನೀಡಿದರು.

ಪೊಲೀಸರು ಮತ್ತು ಸಮಾಜ ಹಿರಿಯರೊಂದಿಗೆ ಸೌಜನ್ಯದಿಂದ ವರ್ತಿಸಿದಾಗ ಮಾತ್ರ ದಿನಾಚರಣೆಗಳಿಗೆ ಅರ್ಥ ಬರುತ್ತದೆ. ಸಮಾಜಕ್ಕೆ ಹಿರಿಯ ಮಾರ್ಗದರ್ಶನ ಅತ್ಯಗತ್ಯವಾಗಿದೆ ಎಂದು ಹೇಳಿದರು.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಹಿರಿಯ ಸಹಾಯವಾಣಿಗೆ ಇದುವರೆಗೂ 202467 ಕರೆಗಳು ಬಂದಿದ್ದು, ಅವುಗಳ ಪೈಕಿ 9692 ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ. 5176 ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಗೊಳಿಸಲಾಗಿದೆ. 32,374 ಹಿರಿಯರ ಜೊತೆ ಸಮಾಲೋಚನೆ ನಡೆಸಲಾಗಿದೆ ಎಂದು ವಿವರಿಸಿದರು.
ಶ್ರೀಮತಿ ಡಾ.ರಾಧಾ ಎಸ್.ಮೂರ್ತಿ, ಪ್ರೇಮ್‍ಕುಮಾರ್ ರಾಜ, ಶ್ರೀಮತಿ ವಿಜಯಮ್ಮ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ