ಪಕ್ಷೇತರರಿಗೆ ಮಣೆ-ಕಾಂಗ್ರೇಸ್ ವಲಯದಲ್ಲಿ ಅಸಮಾಧಾನ

ಬೆಂಗಳೂರು, ಜೂ.15-ಹಲವಾರು ರೀತಿಯ ಎಚ್ಚರಿಕೆಗಳ ಹೊರತಾಗಿಯೂ ಕಾಂಗ್ರೆಸ್ ಹೈಕಮಾಂಡ್ ಅತೃಪ್ತ ಶಾಸಕರನ್ನು ಕಡೆಗಣಿಸಿರುವುದರಿಂದ ರೊಚ್ಚಿಗೆದ್ದಿರುವ ಸುಮಾರು 12 ಮಂದಿ ಬಿಜೆಪಿಯತ್ತ ವಲಸೆ ಹೋಗಿ ಸರ್ಕಾರದ ಪತನಕ್ಕೆ ವೇದಿಕೆ ಸಿದ್ಧಪಡಿಸುತ್ತಿದ್ದಾರೆ.

ಪಕ್ಷದ ಹಿರಿಯ ಶಾಸಕರನ್ನು ಕಡೆಗಣಿಸಿ ಪಕ್ಷೇತರರಿಗೆ ಸಚಿವ ಸ್ಥಾನ ನೀಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಅತೃಪ್ತರನ್ನು ಮತ್ತಷ್ಟು ಕೆಣಕಿದೆ. ಒಂದು ವೇಳೆ ಅತೃಪ್ತರು ಬಿಜೆಪಿ ಸೇರಿದರೂ ಕೂಡ ಕಾಂಗ್ರೆಸ್‍ನ ಶಾಸಕರು ಸರ್ಕಾರದ ಜೊತೆ ಗಟ್ಟಿಯಾಗಿ ನಿಂತಿದ್ದರೆ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಅಪಾಯವಾಗುತ್ತಿರಲಿಲ್ಲ.

ಶಾಸಕರ ವಿಶ್ವಾಸವನ್ನು ಉಳಿಸಿಕೊಳ್ಳದೆ ಪಕ್ಷೇತರರಿಗೆ ಮಣೆ ಹಾಕಿರುವುದು ಕಾಂಗ್ರೆಸ್ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ರಮೇಶ್ ಜಾರಕಿ ಹೊಳಿ, ಮಹೇಶ್ ಕುಮಟಳ್ಳಿ, ಬಿ.ಸಿ.ಪಾಟೀಲ್, ಪ್ರತಾಪ್‍ಗೌಡ ಪಾಟೀಲ್, ಆನಂದ್‍ಸಿಂಗ್, ಜೆ.ಎನ್.ಗಣೇಶ್, ಸುಧಾಕರ್, ಶಿವರಾಮ್ ಹೆಬ್ಬಾರ್ ಸೇರಿದಂತೆ ಸುಮಾರು 12ಕ್ಕೂ ಹೆಚ್ಚು ಮಂದಿ ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ.

ಬೆಂಗಳೂರಿನ ಆನಂದ್‍ರಾವ್ ವೃತ್ತದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆಗೆ ಕುಳಿತು ಗಮನವನ್ನು ಬೇರೆಡೆ ಸೆಳೆಯುತ್ತಿದ್ದರೆ, ಅತ್ತ ತೆರೆಮರೆಯಲ್ಲಿ ಆಪರೇಷನ್ ಕಮಲ ಚುರುಕಿನಿಂದ ನಡೆಯುತ್ತಿದೆ ಎಂದು ಹೇಳಲಾಗಿದೆ.

ಸರ್ಕಾರ ಏಕೆ ಉಳಿಯಬೇಕು ಎಂಬ ಪ್ರಶ್ನೆಯನ್ನು ಅತೃಪ್ತರು ಮುಂದಿಟ್ಟು, ಶಾಸಕರ ಕೆಲಸಗಳೂ ಆಗುತ್ತಿಲ್ಲ, ಅಧಿಕಾರವೂ ಸಿಗುತ್ತಿಲ್ಲ. ಈ ಮೊದಲು ಅಧಿಕಾರ ಅನುಭವಿಸಿದರೆ ಮತ್ತೆ ಸಚಿವರಾಗುವುದಾದರೆ ನಾವೆಲ್ಲಾ ಏನು ಮಾಡಬೇಕು ಎಂಬ ಪ್ರಶ್ನೆಗಳನ್ನು ಅತೃಪ್ತರು ಮುಂದಿಟ್ಟಿದ್ದಾರೆ.

ರಾಜ್ಯದ ಗಮನ ಐಎಂಎ ಹಗರಣ ಮತ್ತು ಬಿಜೆಪಿ ಪ್ರತಿಭಟನೆಯತ್ತ ಇದ್ದರೆ, ಬಿಜೆಪಿಯ ಮತ್ತೊಂದು ತಂಡ ಸದ್ದಿಲ್ಲದೆ ಕಾಂಗ್ರೆಸ್-ಜೆಡಿಎಸ್‍ನ ಅತೃಪ್ತರನ್ನು ಸಂಪರ್ಕಿಸಿ ಕಾರ್ಯಾಚರಣೆ ನಡೆಸುತ್ತಿದೆ.

ನಿರೀಕ್ಷೆಯಂತೆ ಎಲ್ಲವೂ ನಡೆದರೆ ಈ ತಿಂಗಳಾಂತ್ಯದೊಳಗೆ ಸಮ್ಮಿಶ್ರ ಸರ್ಕಾರಕ್ಕೆ ಸಂಖ್ಯಾಬಲದ ಕೊರತೆ ಇದೆ ಎಂದು ರಾಜ್ಯಪಾಲರಿಗೆ ದೂರು ನೀಡುವ ಸಾಧ್ಯತೆಗಳಿವೆ. ಬಿಜೆಪಿಯ ದೂರಿನಲ್ಲಿ ಸತ್ಯಾಂಶವಿರುವುದು ಕಂಡುಬಂದರೆ ರಾಜ್ಯಪಾಲರು ವಿಶ್ವಾಸ ಮತವನ್ನು ಸಾಬೀತುಪಡಿಸುವಂತೆ ಮುಖ್ಯಮಂತ್ರಿಗೆ ಸೂಚಿಸುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ