ಅಹ್ಮದಾಬಾದ್: ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡ ವಾಯುಭಾರ ಕುಸಿತದಿಂದ ‘ವಾಯು’ ಚಂಡಮಾರುತ ಹುಟ್ಟಿಕೊಂಡಿದ್ದು, ಇಂದು ಮಧ್ಯಾಹ್ನ ಗುಜರಾತ್ ಕಾರವಳಿ ಸಮೀಪ ಹಾದು ಹೋಗಲಿದೆ. ಹಾಗಾಗಿ ಹಾನಿ ಪ್ರಮಾಣ ಕಡಿಮೆ ಆಗಲಿದೆ ಎಂದು ಅಂದಾಜಿಸಲಾಗಿದೆ.
“ವಾಯು ಚಂಡಮಾರುತ ಗುಜರಾತ್ಗೆ ಅಪ್ಪಳಿಸುವುದಿಲ್ಲ. ಆದರೆ, ವೆರಾವಲ್, ಪೋರಬಂದರ ಹಾಗೂ ದ್ವಾರಕಾ ಕರಾವಳಿ ತೀರದ ಸಮೀಪ ಹಾದು ಹೋಗಲಿದೆ. ಈ ವೇಳೆ ಈ ಭಾಗದಲ್ಲಿ ಭಾರೀ ಗಾಳಿ-ಮಳೆ ಉಂಟಾಗಲಿದೆ,” ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಚಂಡಮಾರುತದ ವೇಗ 135-160 ಕಿ.ಮೀ ಇರಲಿದೆ. ಅಲ್ಲದೆ ಈ ಮಾರುತ 180 ಕಿ.ಮೀ ವೇಗ ಪಡೆದುಕೊಳ್ಳುವ ಸಾಧ್ಯತೆ ಇದೆ. ಪೋರಬಂದರು, ಮಹುವಾ ಹಾಗೂ ಇತರ ಭಾಗದಲ್ಲಿ ಮುಂಜಾಗೃತ ಕ್ರಮ ಕೈಗೊಳ್ಳಲಾಗುತ್ತಿದೆ. 2.30 ಲಕ್ಷ ಜನರನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು ಈ ಭಾಗದಲ್ಲಿ ನಿಯೋಜನೆ ಮಾಡಲಾಗಿದೆ.
ರಾಜ್ಯದ ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು, ಮಲೆನಾಡು ಭಾಗದಲ್ಲಿ ಚಂಡಮಾರುತದ ಪ್ರಭಾವದಿಂದ ಮಳೆ ಆಗುಗುತ್ತಿದ್ದು, ಅದರಲ್ಲೂ ಕರಾವಳಿ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಮಹಾರಾಷ್ಟ್ರ, ಕರ್ನಾಟಕ ಸಮುದ್ರ ತೀರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.