ಮಂತ್ರಿ ಪರಿಷತ್ ಸಭೆಯಲ್ಲಿ ಸಚಿವರಿಗೆ ಮೋದಿ ನೀಡಿದ ಆ ಒಂದು ಸೂಚನೆ ಏನು ಗೊತ್ತೇ?

ಹೊಸದಿಲ್ಲಿ: ಬೆಳಗ್ಗೆ 9.30ರ ಒಳಗಡೆ ಸಚಿವರು ಕಚೇರಿಗೆ ತಪ್ಪದೇ ಆಗಮಿಸಬೇಕೆಂದು ಪ್ರಧಾನಿ ಮೋದಿ ನೂತನ ಸಚಿವರಿಗೆ ಸೂಚನೆ ನೀಡಿದ್ದಾರೆ.

ಬುಧವಾರ ಮಂತ್ರಿ ಪರಿಷತ್ ಸಭೆಯಲ್ಲಿ ಮಾತನಾಡಿದ ಮೋದಿ, ಕಚೇರಿಗೆ 9.30ರ ಒಳಗಡೆ ಬರಬೇಕು. ಮನೆಯಿಂದ, ಇತರ ಸ್ಥಳಗಳಿಂದ ಕುಳಿತು ಕಚೇರಿಯ ಕೆಲಸವನ್ನು ನಿರ್ವಹಿಸಬೇಡಿ ಎಂದು ಸೂಚನೆ ಕೊಟ್ಟಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಕಿರಿಯ ಸಚಿವರಿಗೆ ಹಿರಿಯ ಸಚಿವರು ಮಾರ್ಗದರ್ಶನ ನೀಡಬೇಕು. ಕ್ಯಾಬಿನೆಟ್ ಖಾತೆಯ ಸಚಿವರು ರಾಜ್ಯ ಖಾತೆಯ ಸಚಿವರ ಜೊತೆ ಮುಖ್ಯವಾದ ಫೈಲ್‍ಗಳನ್ನು ಹಂಚಿಕೊಳ್ಳಬೇಕು. ಸಚಿವಾಲಯದ ಬೆಳವಣಿಗೆಯನ್ನು ಪ್ರತಿನಿತ್ಯ ಗಮನಿಸಬೇಕು ಮತ್ತು ಅಧಿಕಾರಿಗಳ ಜೊತೆ ಚರ್ಚೆ ನಡೆಸಬೇಕು ಎಂದು ಮೋದಿ ಸಲಹೆ ನೀಡಿದ್ದಾರೆ.

ಸಚಿವರು ಆಯಾ ರಾಜ್ಯಗಳ ಸಂಸದರು ಮತ್ತು ಸಾರ್ವಜನಿಕರ ಜೊತೆ ನಿರಂತರ ಸಂಪರ್ಕದಲ್ಲಿರಬೇಕು. ಫೈಲ್ ರವಾನೆಗೆ ಕ್ಯಾಬಿನೆಟ್, ರಾಜ್ಯ ಸಚಿವರು, ಸಚಿವಾಲಯದ ಅಧಿಕಾರಿಗಳ ಜೊತೆ ಸ್ಥಳದಲ್ಲಿ ಚರ್ಚಿಸಿ ಕೂಡಲೇ ನಿರ್ಧಾರ ತೆಗೆದುಕೊಳ್ಳಬೇಕು. ಅನಗತ್ಯವಾಗಿ ಫೈಲ್‍ ವಿಳಂಬ ಆಗದಂತೆ ನೋಡಿಕೊಳ್ಳಬೇಕು. ಈ ಮೂಲಕ ವೇಗವಾಗಿ ಸರ್ಕಾರ ಕೆಲಸ ಮಾಡಬೇಕು ಎಂದು ಮೋದಿ ಸಚಿವರಿಗೆ ಕಿವಿ ಮಾತು ಹೇಳಿದ್ದಾರೆ.

5 ವರ್ಷಕ್ಕೆ ಸಂಬಂಧಿಸಿದಂತೆ ನಿಮ್ಮ ಯೋಜನೆಗಳು ಏನು ಎನ್ನುವುದನ್ನು ಪ್ರತಿ ಇಲಾಖೆ ತಿಳಿಸಬೇಕು ಎಂದು ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸಂಸತ್ತಿನ ಬಜೆಟ್ ಅವಧಿಯನ್ನು ಚೆನ್ನಾಗಿ ಬಳಸಿಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ಮಾತನಾಡಿದ್ದಾರೆ. ಈ ಹಿಂದೆ ತೋಮರ್ ಸಂಸದೀಯ ವ್ಯವಹಾರಗಳ ರಾಜ್ಯ ಖಾತೆಯ ಸಚಿವರಾಗಿದ್ದರು.

ರೈಲ್ವೇ ಸಚಿವ ಪಿಯೂಶ್ ಗೋಯಲ್ ರೈಲ್ವೇ ಇಲಾಖೆಗೆ ಸಂಬಂಧಿಸಿದಂತೆ 5 ವರ್ಷ್ ವಿಷನ್ ಪ್ಲಾನ್ ಬಗ್ಗೆ ಮಾತನಾಡಿದರೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಬಗ್ಗೆ ಮಾತನಾಡಿದ್ದಾರೆ  ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ.

ಮಂತ್ರಿ ಪರಿಷತ್ ಸಭೆಯನ್ನು ಮೋದಿ ಈ ಹಿಂದಿನ ಅವಧಿಯಲ್ಲೂ ನಡೆಸುತ್ತಿದ್ದರು. ಪ್ರತಿ ಸಭೆಯಲ್ಲಿ ಇಲಾಖೆಯ ಪ್ರಗತಿಯ ಮಾಹಿತಿ ಮತ್ತು ಸಚಿವರ ಕಾರ್ಯವೈಖರಿಯನ್ನು ವಿಮರ್ಷಿಸಿ ಮೋದಿ ಸಲಹೆ ಸೂಚನೆ ನೀಡುತ್ತಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ