ಬೆಂಗಳೂರು, ಜೂ.12-ಜಿಂದಾಲ್ಗೆ ಮಾರಾಟ ಮಾಡಿರುವ ಭೂಮಿಯನ್ನು ಹಿಂಪಡೆಯಲು ಮುಂದಾಗಿರುವ ರಾಜ್ಯಸರ್ಕಾರದ ನಿರ್ಧಾರವನ್ನು ಸ್ವಾಗತಿಸುವುದಾಗಿ ಮಾಜಿ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟರ್ನಲ್ಲಿ ಪ್ರತಿಕ್ರಿಯಿಸಿರುವ ಅವರು, ಜಿಂದಾಲ್ ಭೂಮಿ ಮಾರಾಟ ಕುರಿತು ಮರುಪರಿಶೀಲನೆ ಮಾಡುವ ಮುಖ್ಯಮಂತ್ರಿಗಳ ನಿರ್ಣಯ ಸ್ವಾಗತಾರ್ಹ ಎಂದು ಹೇಳುವ ಜೊತೆಗೆ ಕುಮಾರಸ್ವಾಮಿ, ಪರಮೇಶ್ವರ್, ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣಭೆರೇಗೌಡ ಅವರನ್ನು ಅಭಿನಂದಿಸಿದ್ದಾರೆ.
ಹತ್ತು ವರ್ಷಗಳ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಂದಾಲ್ಗೆ 3600 ಕ್ಕೂ ಹೆಚ್ಚು ಎಕರೆ ಭೂಮಿಯನ್ನು ಭೋಗ್ಯ ಮತ್ತು ಖರೀದಿ ಆಧಾರದಲ್ಲಿ ನೀಡಲಾಗಿತ್ತು. 10 ವರ್ಷಗಳ ನಂತರ ಭೋಗ್ಯದ ಅವಧಿ ಮುಗಿದು ಜಿಂದಾಲ್ ಕಂಪನಿ ಸರ್ಕಾರದ ಎಲ್ಲಾ ಷರತ್ತುಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಭೋಗ್ಯದ ಆಧಾರದ ಮೇಲೆ ನೀಡಿದ್ದ ಭೂಮಿಯನ್ನು ಖರೀದಿ ಕರಾರು ಮಾಡಿಕೊಡಲು ಸರ್ಕಾರ ಮೇ ತಿಂಗಳಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿತ್ತು. ಇದಕ್ಕೆ ಎಚ್.ಕೆ.ಪಾಟೀಲ್ ತೀವ್ರ ಆಕ್ರೋಶವ್ಯಕ್ತಪಡಿಸಿದ್ದಲ್ಲದೆ, ಖಾರವಾದ ಪತ್ರಗಳನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಹಲವರಿಗೆ ಬರೆದಿದ್ದರು. ಜೊತೆಗೆ ಜಿಂದಾಲ್ ಕಂಪನಿ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿ ಅದಕ್ಕೆ ಪೂರಕವಾಗಿ ಲೋಕಾಯುಕ್ತರ ಅಕ್ರಮ ಗಣಿ ತನಿಖಾ ವರದಿ ಮತ್ತು ಇತರ ದಾಖಲೆಗಳನ್ನು ಬಹಿರಂಗಪಡಿಸಿದ್ದರು.
ಸರ್ಕಾರಕ್ಕೆ ಇದು ಭಾರೀ ಮುಜುಗರ ಉಂಟು ಮಾಡಿತ್ತು. ವಿರೋಧ ಪಕ್ಷವಾದ ಬಿಜೆಪಿ ಜಿಂದಾಲ್ಗೆ ಭೂಮಿ ಮಾರಾಟ ವಿಷಯವನ್ನು ಮುಂದಿಟ್ಟುಕೊಂಡು ಹೋರಾಟಕ್ಕೆ ಅಣಿಯಾಗುತ್ತಿತ್ತು.
ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದರಿಂದ ಎಚ್ಚೆತ್ತುಕೊಂಡ ರಾಜ್ಯಸರ್ಕಾರ ತನ್ನ ಈ ಮೊದಲಿನ ನಿರ್ಧಾರವನ್ನು ಮರುಪರಿಶೀಲಿಸಲು ಮುಂದಾಗಿದೆ. ನಿನ್ನೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮತ್ತು ಸಚಿವ ಕೆ.ಜೆ.ಜಾರ್ಜ್ ಅವರು ಪ್ರತ್ಯೇಕ ಸಭೆ ನಡೆಸಿದ್ದರು.
ಜಿಂದಾಲ್ಗೆ ಭೂಮಿ ಮಾರಾಟ ಮಾಡಲು ಮುಂದಾಗಿರುವ ನಿರ್ಧಾರವನ್ನು ಮರುಪರಿಶೀಲಿಸುವ ಸಲುವಾಗಿ ಕಡತವನ್ನು ಮತ್ತೊಮ್ಮೆ ಸಂಪುಟ ಸಭೆಯಲ್ಲಿ ಮಂಡಿಸುವಂತೆ ಕುಮಾರಸ್ವಾಮಿ ಜಾರ್ಜ್ ಅವರಿಗೆ ಸೂಚಿಸಿದ್ದಾರೆ. ಈ ನಿರ್ಣಯವನ್ನು ಎಚ್.ಕೆ.ಪಾಟೀಲ್ ಸ್ವಾಗತಿಸಿದ್ದಾರೆ.