ಕೆಪಿಎಸ್‍ಸಿಯಲ್ಲಿ ಚಿತ್ರಕಲಾ ಶಿಕ್ಷಕರ ನೇಮಕ ವಿಳಂಬ ನೀತಿ ಖಂಡಿಸಿ ಪ್ರತಿಭಟನೆ

ಬೆಂಗಳೂರು, ಜೂ.12- ಕೆಪಿಎಸ್‍ಸಿ ನಡೆಸಿರುವ ವಿವಿಧ ವಿಭಾಗಗಳ ಪರೀಕ್ಷೆ ಫಲಿತಾಂಶ ಪ್ರಕಟಗೊಂಡರೂ ಸಂದರ್ಶನಕ್ಕೆ ವಿಳಂಬ ಮಾಡುತ್ತಿರುವ ನೀತಿ ವಿರೋಧಿಸಿ ಹಾಗೂ ಶೀಘ್ರ ಚಿತ್ರಕಲಾ ಶಿಕ್ಷಕರ ನೇಮಕಾತಿ ಆಗ್ರಹಿಸಿ ಕೆಪಿಎಸ್‍ಸಿ ಕಚೇರಿ ಎದುರು ಇಂದು ಬಿಜೆಪಿ ಶಾಸಕ ಸುರೇಶ್‍ಕುಮಾರ್ ನೇತೃತ್ವದಲ್ಲಿ ನೂರಾರು ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರು.

ಮೈತ್ರಿ ಸರ್ಕಾರ ಹಾಗೂ ಕೆಪಿಎಸ್‍ಸಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶವ್ಯಕ್ತಪಡಿಸಿದ ಪ್ರತಿಭಟನಾಕಾರರು, ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಸ್ಥಿತಿ ರಾಜ್ಯದ್ದಾಗಿದೆ. ಚಿತ್ರಕಲಾ ಶಿಕ್ಷಕರ ನೇಮಕದಲ್ಲೂ ವಿಳಂಬ ನೀತಿ ಅನುಸರಿಸುತ್ತಿದ್ದು, ಕೂಡಲೇ ಶಿಕ್ಷಕರ ಸಂದರ್ಶನ ಮಾಡಿ ನೇಮಕ ಮಾಡಬೇಕು, ವಯೋಮಿತಿ ಅಂಚಿನಲ್ಲಿರುವ ಚಿತ್ರಾಕಲಾ ಶಿಕ್ಷಕರನ್ನು ಸರ್ಕಾರ ಉಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಕೆಪಿಎಸ್‍ಸಿ ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸದಿದ್ದರೆ ಹೋರಾಟ ಮುಂದುವರೆಸುವುದಾಗಿ ಎಚ್ಚರಿಸಿದರು.
ಮೂರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಡಿಪೆÇ್ಲಮಾ ಶಿಕ್ಷಕರ ನೇಮಕಾತಿ ಮಾಡಬೇಕು, ಕೆಪಿಎಸ್‍ಸಿ 2015ರ ಸಂದರ್ಶನ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಸುರೇಶ್ ಕುಮಾರ್ ಮಾತನಾಡಿ, ಸರ್ಕಾರ ಹಾಗೂ ಕೆಪಿಎಸ್‍ಸಿಯಿಂದ ಸಮನ್ವಯತೆ ಕೊರತೆಯಿಂದ ಅಭ್ಯರ್ಥಿಗಳು ಕಂಗಾಲಾಗುತ್ತಿದ್ದಾರೆ. ಫಲಿತಾಂಶ ಪ್ರಕಟಗೊಂಡು ಆರು ತಿಂಗಳು ಕಳೆದರೂ ಇದುವರೆಗೂ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆದಿಲ್ಲ. ನಾನು ಅನೇಕ ಬಾರಿ ಸರ್ಕಾರದ ಮುಖ್ಯಕಾರ್ಯದರ್ಶಿಗಳನ್ನು , ಕೆಪಿಎಸ್‍ಸಿ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದು ಆರೋಪಿಸಿದರು.

ಕೆಪಿಎಸ್‍ಸಿ ಇದೆಯೋ, ಇಲ್ಲವೋ ಎಂಬ ಅನುಮಾನಗಳು ಕಾಡುತ್ತಿವೆ. ಎಲ್ಲಾ ಇಲಾಖೆಗಳ ಹುದ್ದೆಗಳ ನೇಮಕ ವಿಚಾರದಲ್ಲೂ ಕೂಡ ಉದಾಸೀನ ಧೋರಣೆ ಅನುಸರಿಸಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ