ಬೆಂಗಳೂರು,ಜೂ.12- ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಉಂಟಾಗದಂತೆ ಸಕಲ ಸಿದ್ದತೆ ಮಾಡಿಕೊಳ್ಳಬೇಕು ಹಾಗೂ ಕೆಲಸಕಾರ್ಯಗಳಿಗೆ ಜನರನ್ನು ತಾಲ್ಲೂಕು ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಅಲೆದಾಡಿಸುವುದನ್ನು ತಪ್ಪಿಸಬೇಕು ಎಂದು ಮುಖ್ಯಮಂತ್ರಿಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ಆರಂಭವಾದ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಂಗಾರು ಮಳೆ ಆರಂಭವಾಗುತ್ತಿದ್ದು, ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಸಮಸ್ಯೆ ಎದುರಾದರೆ ಎದುರಿಸಲು ಸಿದ್ದವಾಗಿರಬೇಕು, ಎಲ್ಲ ತಯಾರಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿಗಳು, ಜಿಪಂ ಕಾರ್ಯ ನಿರ್ವಹಣಾಧಿಕಾರಿಗಳು ಜನಸ್ನೆಹಿಯಾಗಿ ಮಾನವೀಯತೆಯಿಂದ ಕೆಲಸ ಮಾಡಬೇಕು. ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ಹಾಗೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದರು.
ತಾಲ್ಲೂಕು ಕಚೇರಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದರೆ ಬಹಳಷ್ಟು ಸಮಸ್ಯೆಗಳು ಕಡಿಮೆಯಾಗುತ್ತವೆ. ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ.
ಹಲವು ವರ್ಷಗಳಿಂದ ತಹಸೀಲ್ದಾರ್ ಕಚೇರಿ ಮತ್ತು ಡಿಸಿ ಕಚೇರಿಗಳಲ್ಲಿ ವ್ಯಾಜ್ಯಗಳು ಬಗೆಹರಿದಿಲ್ಲ. ಖಾತೆ ನಿರ್ವಹಣೆ ವಿಚಾರದಲ್ಲಿ ಪದೆ ಪದೇ ಕಚೇರಿಗೆ ಅಲೆದಾಡಿಸುವುದು ಸರಿಯಲ್ಲ.
ಯಾವುದೇ ರೀತಿಯ ಕಡತಗಳು ಸರ್ಕಾರದಲ್ಲಿ ವಿಲೇವಾರಿಯಾಗದೆ ಉಳಿದಿಲ್ಲ. ಹಿಂದಿನ ಸಕ್ರಾರಕ್ಕೆ ಹೋಲಿಸಿದರೆ ಮೈತ್ರಿ ಸರ್ಕಾರದಲ್ಲಿ ತಕ್ಷಣದ ಪರಿಹಾರ ದೊರೆಯುತ್ತಿದೆ ಎಂದು ಹೇಳಿದರು.
ಅಧಿಕಾರಿಗಳ ಕಾರ್ಯಕ್ಕೆ ಶ್ಲಾಘನೆ:
ಲೋಕಸಭೆ ಚುನಾವಣೆ ನೀತಿ ಸಂಹಿತೆ ನಡುವೆಯೂ ತೀವ್ರತರವಾದ ಬರಗಾಲದ ನಿರ್ವಹಣೆ ವಿಚಾರದಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಣೆ ಮಾಡಿದ್ದೀರಿ ಎಂದು ಅಧಿಕಾರಿಗಳನ್ನು ಶ್ಲಾಘಿಸಿದರು.
ಮೇವಿನ ಅಭಾವ, ನೀರಿನ ಕೊರತೆ, ಜನರಿಗೆ ಉದ್ಯೋಗ ನೀಡುವ ವಿಚಾರದಲ್ಲಿ ಜಿಲ್ಲಾಡಳಿತ ಸಮರ್ಥವಾಗಿ ಕಾರ್ಯ ನಿರ್ವಹಿಸಿದೆ. ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆ ಪಡೆದು ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿದೆ. ಬರದ ಬಗ್ಗೆ ವಿರೋಧ ಪಕ್ಷ ಮಾಡಿರುವ ಟೀಕೆಯನ್ನು ಗಮನಿಸಿದ್ದು, ಹೊರನೋಟಕ್ಕೆ ಪ್ರಚಾರಕ್ಕಾಗಿ ಮಾಡಿದಂತಿದೆ ಎಂದು ಹೇಳಿದರು.
ಒಂದೇ ಕಂತಿನಲ್ಲಿ ಸಾಲಮನ್ನ: ರಾಷ್ಟ್ರೀಕೃತ ಬ್ಯಾಂಕ್ಗಳು ಒಳಗೊಂಡಂತೆ ಒಂದೇ ಕಂತಿನಲ್ಲಿ ಶಾಲಾ ಮನ್ನಾ ಮಾಡಲು ಆದೇಶ ಹೊರಡಿಸಲಾಗಿದೆ. ರೈತರ ಸಾಲಮನ್ನಾ ಯೋಜನೆಯಲ್ಲಿ ಫಲಾನುಭವಿಗಳನ್ನು ಗುರುತಿಸುವಲ್ಲಿ ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೀರಿ. ಮಧ್ಯವರ್ತಿಗಳ ಪಾಲಾಗದಂತೆ ರೈತರಿಗೆ ತಲುಪುವಂತೆ ಕಾರ್ಯ ನಿರ್ವಹಿಸಿದ್ದೀರಿ. ಅದೇ ರೀತಿ ಮಂಡ್ಯಜಿಲ್ಲೆ ಪಾಂಡವಪುರದ ಬಸ್ ದುರಂತ, ಸುಳ್ವಾಡಿ ಗ್ರಾಮದ ವಿಷ ಪ್ರಾಶನ ಧಾರವಾಡದ ಕಟ್ಟಡ ಕುಸಿತ ಪ್ರಕರಣಗಳಲ್ಲಿ ಜಿಲ್ಲಾಧಿಕಾರಿಗಳು ಸ್ಪಂದಿಸಿದ ರೀತಿ ಶ್ಲಾಘನೀಯ ಎಂದರು.
ಈ ಹಿಂದೆ ಹೇಳಿದಂತೆ ಜಿಲ್ಲಾಧಿಕಾರಿಗಳು ವಾರದಲ್ಲಿ ಒಮ್ಮೆ ಹೋಬಳಿ ಇಲ್ಲವೆ ಗ್ರಾಪಂಗೆ ಭೇಟಿ ನೀಡಿ ಜನರ ಸಮಸ್ಯೆ ಅಲಿಸಿ ನಿವಾರಣೆ ಮಾಡುವಂತೆ ಹಾಗೂ ಹಾಸ್ಟೆಲ್ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಲು ಸಲಹೆ ನೀಡಿದ್ದೆ. ಅದನ್ನು ಕೂಡ ಮುಂದುವರೆಸಬೇಕು ಎಂದು ಹೇಳಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯಡಿ ಕೆಲವೆಡೆ ಉತ್ತಮವಾಗಿ ಕೆಲಸವಾಗುತ್ತಿದೆ. ಇನ್ನು ಹೆಚ್ಚಿನ ಕೆಲಸ ಆರಂಭಿಸಬೇಕಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವರು ಹೆಚ್ಚು ಆಸಕ್ತಿ ವಹಿಸಿದ್ದಾರೆ. ಎಂಟು ಕೋಟಿಗೂ ಹೆಚ್ಚು ಉದ್ಯೋಗ ಸೃಷ್ಟಿಸಲಾಗುತ್ತಿದೆ.
ಕೇಂದ್ರದಿಂದ ಈ ಯೋಜನೆಯಡಿ ಹಣ ಬಾರದಿದ್ದರೂ ರಾಜ್ಯವೇ ಬಿಡುಗಡೆ ಮಾಡಿದೆ ಕುಮಾರಸ್ವಾಮಿ ತಿಳಿಸಿದರು.
ಗ್ರಾಮವಾಸ್ತವ್ಯ ಗಿಮಿಕ್ ಅಲ್ಲ:
ಸರ್ಕಾರ ಮತ್ತು ಜನರ ಮಧ್ಯೆ ಕಂದಕ ಇರಬಾರದು ಎಂಬ ಉದ್ದೇಶದಿಂದ ಈ ಬಾರಿಯ ಗ್ರಾಮವಾಸ್ತವ್ಯಕ್ಕೆ ಹೊಸ ರೂಪ ಕೊಡಲಾಗಿದೆ. ಗ್ರಾಮಪಂಚಾಯ್ತಿ ಕೇಂದ್ರ ಸ್ಥಾನದಲ್ಲಿ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಒದಗಿಸುವ ಹೊಸ ಯೋಜನೆ ಹಾಕಿಕೊಳ್ಳಲಾಗಿದೆ.
ಎಲ್ಲ ಇಲಾಖೆಗಳ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಸಮಸ್ಯೆ ಪರಿಹರಿಸಲಿದ್ದಾರೆ. ಇದು ಪ್ರಚಾರಕ್ಕಾಗಿ ಮಾಡಿದ ಗಿಮ್ಮಿಕ್ಕಲ್ಲ. ಅಧಿಕಾರಿಗಳು ನಾವು ನೀಡಿದ ಸೂಚನೆಗಳನ್ನು ತಕ್ಷಣ ಕಾರ್ಯರೂಪಕ್ಕೆ ತರುವಂತಹ ಆಸಕ್ತಿ ರೂಢಿಸಿಕೊಳ್ಳಬೇಕು ಎಂದರು.
ಗ್ರಾಮವಾಸ್ತವ್ಯ ಬಗ್ಗೆ ವ್ಯಕ್ತವಾಗುವ ಟೀಕೆಟಿಪ್ಪಣಿಗಳಿಗೆ ಹೆಚ್ಚು ಗಮನಹರಿಸುವುದಿಲ್ಲ. ಹೆರೂರ್(ಬಿ) ಗ್ರಾಮದಲ್ಲಿ ಇದೇ 22ರಂದು ಗ್ರಾಮ ವಾಸ್ತವ್ಯ ಹೈಡಲಿದ್ದು, ಆ ಊರಿನ ಜನರು ರಸ್ತೆ ಹಾಗೂ ಕುಡಿಯುವ ನೀರು ಒದಗಿಸಿದರೆ ಸಾಕು ಎಂದು ಹೇಳುತ್ತಿದ್ದಾರೆ. ಆದರೆ ಕಳೆದ 8 ವರ್ಷಗಳಿಂದ ನೀರಿನ ಟ್ಯಾಂಕರ್ ರಿಪೇರಿಯೇ ಆಗಿಲ್ಲ. ಇದಕ್ಕೆ ಇಂದಿನ ಸರ್ಕಾರ ಹೊಣೆಯೇ?ಎಂದು ಪ್ರಶ್ನಿಸಿದರು.
ಪಡಿತರ ಚೀಟಿಗೆ ಶ್ವಾತ ಪರಿಹಾರ:
ಈ ಪಡಿತರಚೀಟಿಯೊಂದಿಗೆ ಆಧಾರ್ಕಾರ್ಡ್ ಮತ್ತು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಜೋಡಣೆ ಮಾಡಲು ಜನರು ಕ್ಯೂ ನಿಲ್ಲುವ ಪರಿಸ್ಥಿತಿ ಬಗ್ಗೆ ದೂರವಾಣಿ ಕರೆ ಮಾಡಿ ಗಮನಕ್ಕೆ ತಂದಿದ್ದಾರೆ. ಅವರು ಕೆಲಸಕಾರ್ಯ ಬಿಟ್ಟು ಗಂಟೆಗಟ್ಟಲೇ ನಿಲ್ಲುವುದು ಬೇಡ.ಶಾಶ್ವತ ಪರಿಹಾರ ಕಲ್ಪಿಸುವ ರೀತಿಯಲ್ಲಿ ತೀರ್ಮಾನವಗಬೇಕು. ಜನಸಾಮಾನ್ಯರಿಗೆ ಅನಾನುಕೂಲವಾಗಬಾರದು, ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ಹಾಗೂ ಡಿಸಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದರು.
ಸಚಿವರಾದ ದೇಶಪಾಂಡೆ, ಕೆ.ಜೆ.ಜಾರ್ಜ್, ಡಿ.ಸಿ.ತಮ್ಮಣ್ಣ, ಬಂಡೆಪ್ಪ ಕಾಶ್ಯಂಪುರ್, ಕೃಷ್ಣಭೆರೇಗೌಡ, ಜಮೀರ್ ಅಹಮ್ಮದ್ ಖಾನ್, ಜಯಮಾಲ ಸೇರಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಸೇರಿದಂತೆ ಸರ್ಕಾರದ ಎಲ್ಲ ಅಧಿಕಾರಿಗಳು ಪಾಲ್ಗೊಂಡಿದ್ದರು.