ಸಾರಿಗೆ ಕಚೇರಿಗಳಿಗೆ ಲೋಕಾಯುಕ್ತ ಪೊಲೀಸರ ದಿಢೀರ್ ಭೇಟಿ

ಬೆಂಗಳೂರು,ಜೂ.12- ನಗರ ವ್ಯಾಪ್ತಿಗೊಳಪಡುವ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಸಕಾಲಕ್ಕೆ ಸರ್ಕಾರಿ ಸೇವೆಗಳು ಯಾವುದೇ ತೊಂದರೆ ಇಲ್ಲದೆ ಸಾರ್ವಜನಿಕರಿಗೆ ಲಭ್ಯವಾಗುತ್ತಿವೆಯೋ, ಇಲ್ಲವೋ ಎಂಬ ಸಲುವಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಕರ್ನಾಟಕ ಲೋಕಾಯುಕ್ತ ಪೊಲೀಸರು ವಿವಿಧ ಸಾರಿಗೆ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಬೆಂಗಳೂರುನಗರ ಪೊಲೀಸ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಉಪಾಧೀಕ್ಷಕರು ಮತ್ತು ನಿರೀಕ್ಷಕರನ್ನೊಳಗೊಂಡ ನಾಲ್ಕು ತಂಡಗಳು ರಾಜರಾಜೇಶ್ವರಿನಗರ, ಯಲಹಂಕ, ಕೆ.ಆರ್.ಪುರಂ ಮತ್ತು ಎಲೆಕ್ಟ್ರಾನಿಕ್‍ಸಿಟಿ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ಕೈಗೊಂಡಿತ್ತು.

ಎಲೆಕ್ಟ್ರಾನಿಕ್ ಸಿಟಿ ಪ್ರಾದೇಶಿಕ ಸಾರಿಗೆ ಕಚೇರಿ ಪರಿಶೀಲನೆಯ ಮುಂದಾಳತ್ವವನ್ನು ಖುದ್ದಾಗಿ ಬೆಂಗಳೂರು ನಗರ ವಿಭಾಗದ ಪೊಲೀಸ್ ಅಧೀಕ್ಷಕರಾದ ಡಾ.ಕೆ.ತ್ಯಾಗರಾಜನ್ ವಹಿಸಿದ್ದರು.

ಈ ಕಚೇರಿಗಳಲ್ಲಿ ಕಡತ ವಿಲೇವಾರಿಯಲ್ಲಿ ತಡವಾಗುವ ಬಗ್ಗೆ ,ಸಿಬ್ಬಂದಿ ಅವರ ಹಾಜರಾತಿ ಹಾಗೂ ಸಾರ್ವಜನಿಕರಿಗೆ ಸಕಾಲದಲ್ಲಿ ಸರ್ಕಾರಿ ಸೇವೆಗಳು ಒದಗುತ್ತಿವೆಯೋ ಎಂಬ ಬಗ್ಗೆ ಪರಿಶೀಲನೆ ನಡೆಸಿದರು.

ಪರಿಶೀಲನೆ ವೇಳೆ ಆರ್‍ಟಿಒ ಮಧ್ಯವರ್ತಿಗಳ ಹಾವಳಿ ಬಗ್ಗೆ ಸಹ ಪರಿಶೀಲನೆ ಕೈಗೊಂಡು ಸದರಿ ಕಚೇರಿಗಳ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.

ಎಡಿಜಿಪಿ ಎ.ಎಸ್.ಎನ್.ಮೂರ್ತಿ, ಐಜಿಪಿ ಮುರುಗನ್, ಎಸ್ಪಿ ಡಾ.ಕೆ.ತ್ಯಾಗರಾಜನ್ ಅವರ ಮಾರ್ಗದರ್ಶನದಲ್ಲಿ ಸದರಿ ಪರಿಶೀಲನಾ ತಂಡಗಳ ರಚನೆ ಮತ್ತು ಅನಿರೀಕ್ಷಿತ ಭೇಟಿ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ