ಜುಲೈ 15ರಂದು ಚಂದ್ರಯಾನ-2 ಉಡಾವಣೆ

ಬೆಂಗಳೂರು: ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ನೌಕೆಯನ್ನು ಜುಲೈ 15ರಂದು ಬೆಳಗಿನ ಜಾವ 2:51ಕ್ಕೆ ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಅಧ್ಯಕ್ಷ ಡಾ. ಕೆ ಶಿವನ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವನ್ ಅವರು, ಜಿಎಸ್ಎಲ್ ವಿ ಮಾರ್ಕ್ 3 ರಾಕೆಟ್ ಚಂದ್ರಯಾನ – 2ರ ಪರಿಕರಗಳನ್ನು ಹೊತ್ತೊಯ್ಯಲಿದೆ. ಸೆಪ್ಟೆಂಬರ್ 6 ಅಥವಾ 7 ರಂದು ಜಿಎಸ್ ಎಲ್ ವಿ ರಾಕೆಟ್ ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ. ರೋವರ್(ವಿಕ್ರಂ), ಲ್ಯಾಂಡರ್ ಮತ್ತು ಆರ್ಬಿಟರ್ ಸಹಿತ 3.8 ಟನ್ ತೂಕದ ಮೂರು ಸಾಮಾಗ್ರಿಗಳನ್ನು ರಾಕೆಟ್ ಹೊತ್ತೊಯ್ಯಲಿದೆ ಎಂದು ಹೇಳಿದರು.

15 ನಿಮಿಷಗಳ ಈ ಉಡಾವಣೆಯಲ್ಲಿ ಲ್ಯಾಂಡರ್‌ ಅನ್ನು ಚಂದ್ರನ ನೆಲದ ಮೇಲೆ ಇಳಿಸಲಾಗುವುದು. ಇಸ್ರೋದ ಇತಿಹಾಸದಲ್ಲೇ ಇದೊಂದು ಅತ್ಯಂತ ಕ್ಲಿಷ್ಟಕರ ಕಾರ್ಯಾಚರಣೆಯಾಗಿದೆ ಎಂದು ಶಿವನ್ ತಿಳಿಸಿದ್ದಾರೆ.

ಚಂದ್ರನ ಅಂಗಳವನ್ನು ತಲುಪಲು ಚಂದ್ರಯಾನ-1ರ ಉಡ್ಡಯನದ ವೇಳೆ ಅನುಸರಿಸಿದ ಕಾರ್ಯತಂತ್ರವನ್ನೇ ಈ ಬಾರಿಯೂ ಅನುಸರಿಸಲಾಗುವುದು. ಆದರೆ ಸುಗಮ ಇಳಿಯುವಿಕೆ ಸವಾಲು ಮಾತ್ರ ಸಂಪೂರ್ಣ ಹೊಸದು ಎಂದು ಹೇಳಿದ್ದಾರೆ.

ಚಂದ್ರಯಾನ-2 ಯೋಜನೆಯ ಒಟ್ಟು ವೆಚ್ಚ 603 ಕೋಟಿ ರೂ.ಗಳಾಗಿದ್ದು, ಉಡ್ಡಯನಕ್ಕೆ 375 ಕೋಟಿ ರೂ ವೆಚ್ಚವಾಗುತ್ತದೆ ಎಂದು ವಿವರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ