ಬೆಂಗಳೂರು,ಜೂ.11-ರಾಜ್ಯ ಸರ್ಕಾರದ ಯೋಜನೆಗಳು ಗುಣಾತ್ಮಕ ಅನುಷ್ಠಾನಕ್ಕೆ ಅಧಿಕಾರಿಗಳಿಂದ ಪ್ರಾಮಾಣಿಕ ಹಾಗೂ ಪಾರದರ್ಶಕ ಆಡಳಿತ ನಿರೂಪಣೆ ಮಾಡಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕಳೆದೊಂದು ವರ್ಷದಲ್ಲಿ ರಸ್ತೆ ಕಾಮಗಾರಿಗಳಿಗೆ ಸುಮಾರು 21 ಸಾವಿರ ಕೋಟಿ ರೂ. ಅನುದಾನ ಒದಗಿಸಿದ್ದು, ಈಗಾಗಲೇ ಬಹಳಷ್ಟು ಕಾಮಗಾರಿಗಳಿಗೆ ಚಾಲನೆ ದೊರೆತಿದೆ.ಆರೇಳು ತಿಂಗಳಲ್ಲಿ ರಸ್ತೆ ಕಾಮಗಾರಿಗಳು ಪೂರ್ಣವಾಗಬೇಕು ಎಂದು ಸೂಚಿಸಿದರು.
ಕಳೆದ 30 ವರ್ಷದ ನಂತರ ಇಂತಹ ಅಧಿಕಾರಿಗಳ ಸಮ್ಮೇಳನ ನಡೆಯುತ್ತಿದ್ದು, ಅಧಿಕಾರಿಗಳಿಂದ ಉತ್ತಮ ಕಾರ್ಯ ನಿರ್ವಹಣೆಯನ್ನು ನಿರೀಕ್ಷಿಸಲಾಗುತ್ತಿದೆ.
ಲೋಕೋಪಯೋಗಿ ಹಾಗೂ ನೀರಾವರಿ ಇಲಾಖೆ ಎರಡರಲ್ಲೂ ಮುಕ್ತ ಚರ್ಚೆಗೆ ಅವಕಾಶವಿದ್ದು, ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರೆ ಪರಿಹಾರ ಒದಗಿಸಲು ಸಿದ್ಧವಿರುವುದಾಗಿ ಹೇಳಿದರು.
ರಾಜ್ಯದಲ್ಲಿ ಉತ್ತಮ ರಸ್ತೆಗಳನ್ನು ಕಾಣುವಂತಾಗಿದೆ. ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದ ಕೆಲವೆಡೆ ದೋಷ ಕಂಡುಬರಬಹುದು.ಟೆಂಡರ್ ಪ್ರಕ್ರಿಯೆ ಸಂದರ್ಭದಲ್ಲಿ ಶೇ.30ರಿಂದ 40ರಷ್ಟು ಹೆಚ್ಚು ಬಿಡ್ ಮಾಡುವುದು ಇಲ್ಲವೇ ಶೇ. 5-10ರಷ್ಟು ಕಡಿಮೆ ಬಿಡ್ ಮಾಡಲಾಗುತ್ತದೆ.ಟೆಂಡರ್ ಪ್ರಕ್ರಿಯೆಯಲ್ಲಿ ಪೈಪೋಟಿಯಿಂದಲೋ, ಸ್ವೇಚ್ಚೆಯಿಂದಲೋ ಏರಿಳಿತವಾಗುವುದು ಅವೈಜ್ಞಾನಿಕವಾದದ್ದು. ಖಾಸಗಿ ಸಂಸ್ಥೆಗಳಿಂದ ವಿಸ್ತೃತ ಯೋಜನಾ ವರದಿ ಪ್ರಸ್ತುತಪಡಿಸುವ ವಾತಾವರಣವಿದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಬಿಲ್ ಬರೆಯಲು ಹೆಚ್ಚಿನ ಗಮನಹರಿಸುತ್ತಿದ್ದೀರಿ ಎಂದು ಎಚ್ಚರಿಸಿದರು.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ರಸ್ತೆ ನಿರ್ಮಾಣ ಮತ್ತು ನಿರ್ವಹಣೆ ಕುರಿತಂತೆ 5 ವರ್ಷಗಳನ್ನು ಗುರಿಯಾಗಿಟ್ಟುಕೊಂಡು ಸಮಗ್ರ ನೀಲನಕ್ಷೆ ತಯಾರಿಸುವಂತೆ ಉಪಮುಖ್ಯಮಂತ್ರಿ ಪರಮೇಶ್ವರ್ ಸಲಹೆ ನೀಡಿದ್ದಾರೆ.
ಪ್ರತಿ ವರ್ಷ ರಸ್ತೆ ನಿರ್ಮಾಣಕ್ಕಾಗಿ ಸಾವಿರಾರು ಕೋಟಿ ಖರ್ಚು ಮಾಡಲಾಗುತ್ತಿದೆ.2013-2019ರ ನಡುವೆ ರಸ್ತೆ ನಿರ್ವಹಣೆಗಾಗಿಯೇ ಸುಮಾರು 50 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ.ನಿರ್ವಹಣೆಗಾಗಿಯೇ ಇನ್ನು ಎಷ್ಟು ವರ್ಷ ಹಣ ಕೊಡುತ್ತಲೇ ಇರಬೇಕು. ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ.
ಮುಂದಿನ ಐದು ವರ್ಷಗಳನ್ನುಗುರಿಯಾಗಿಟ್ಟುಕೊಂಡು ವಿಧಾನಸಭಾ ಕ್ಷೇತ್ರವಾರು ರೂಟ್ ಮ್ಯಾಪ್ ಸಿದ್ದ ಮಾಡಿ ಅದನ್ನು ಆಧರಿಸಿ ರಸ್ತೆ ನಿರ್ವಹಣೆಗೆ ಹಣ ನಿಗದಿ ಮಾಡಬೇಕಿದೆ ಎಂದು ಸಲಹೆ ಮಾಡಿದರು.
10 ಕೋಟಿಗೆ ಒಂದು ಕಾಮಗಾರಿಯನ್ನು ಅಂದಾಜುವೆಚ್ಚ ಎಂದು ಗುರುತಿಸಿದರೆ ಅದು ಬೇರೆ ಬೇರೆ ಕಾರಣಗಳಿಗಾಗಿ ಒಂದರಿಂದ ಶೇ.45ರವರೆಗೆ ಯೋಜನಾ ವೆಚ್ಚ ಹೆಚ್ಚಾಗುತ್ತದೆ.
ಕೆಲವೊಮ್ಮೆ ಅಂದಾಜು ವೆಚ್ಚಕ್ಕಿಂತ ಕಡಿಮೆ ಮೊತ್ತಕ್ಕೂ ಗುತ್ತಿಗೆದಾರರು ಟೆಂಡರ್ ಹಾಕುತ್ತಾರೆ. ಹಾಗಿದ್ದ ಮೇಲೆ ಯೋಜನಾ ವೆಚ್ಚವನ್ನು ಯಾವ ಆಧಾರದ ಮೇಲೆ ನಂಬಬೇಕು ಎಂದು ಪ್ರಸ್ನಿಸಿದರು.
ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆ ಭಾರೀ ಮೊತ್ತದ ಹಣವನ್ನು ಒದಗಿಸುತ್ತದೆ. ರಾಜ್ಯದ ಅಭಿವೃದ್ಧಿಯಲ್ಲಿ ಇಂಜಿನಿಯರ್ಗಳ ಪಾತ್ರ ಮುಖ್ಯವಾಗಿದ್ದು, ತಾವು ಚಿಕ್ಕವರು ಇದ್ದಾಗಿನಿಂದಲೂ ಇಂಜಿನಿಯರ್ಗಳು ಎಷ್ಟು ಕಷ್ಟ ಪಡುತ್ತಾರೆ ಎಂಬ ಬಗ್ಗೆ ಅರಿವಿದೆ ಎಂದ ಅವರು, ಕಲ್ಬುರ್ಗಿಯಲ್ಲಿನ ಹೈಕೋರ್ಟ್ನ ಸಂಚಾರಿ ಪೀಠದ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಸಂದರ್ಭದಲ್ಲಿ ನಡೆದ ಚರ್ಚೆಯು ಗಮನದಲ್ಲಿದೆ ಎಂದು ಹೇಳಿದರು.
ಬೆಂಗಳೂರು-ಮೈಸೂರು ನಡುವಿನ ರಾಷ್ಟ್ರೀಯ ಹೆದ್ದಾರಿಯ ಶೇ.80ರಷ್ಟು ಕೆಲಸಕ್ಕೆ ಚಾಲನೆ ದೊರೆತಿದ್ದು, ತ್ವರಿತಗತಿಯಲ್ಲಿ ಅನುಷ್ಠಾನವಾಗಬೇಕು ಎಂದರು.
ಶಾಲಾ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ 1200 ಕೋಟಿ ಅನುದಾನ ಒದಗಿಸಿದ್ದು, ಲೋಕೋಪಯೋಗಿ ಇಲಾಖೆಯಿಂದಲೇ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.