ಐಎಂಎ ಜ್ಯುವೆಲರ್ಸ್ ಮಾಲೀಕನ ಬಂಧನಕ್ಕೆ ಪೊಲೀಸರ ಜಾಲ

ಬೆಂಗಳೂರು, ಜೂ.11- ಸಾರ್ವಜನಿಕರ 500 ಕೋಟಿ ಹೂಡಿಕೆ ಹಣದೊಂದಿಗೆ ನಾಪತ್ತೆಯಾಗಿರುವ ಐಎಂಎ ಜ್ಯುವೆಲರ್ಸ್ ಮಾಲೀಕ ಮೊಹಮದ್ ಮನ್ಸೂರ್ ವಿರುದ್ಧ ಇದುವರೆಗೂ 3000ಕ್ಕೂ ಹೆಚ್ಚು ದೂರು ದಾಖಲಾಗಿದ್ದು ಆತನ ಬಂಧನಕ್ಕಾಗಿ ಪೊಲೀಸರು ಜಾಲ ಬೀಸಿದ್ದಾರೆ.

ಮನ್ಸೂರ್ ಪೂರ್ವಯೋಚಿತವಾಗಿ ದುಬೈ ಇಲ್ಲವೆ ಇಂಗ್ಲೆಂಡ್‍ಗೆ ತೆರಳಿ ತಲೆಮರೆಸಿಕೊಂಡಿರಬಹುದು ಎಂಬ ಅನುಮಾನದ ಹಿನ್ನೆಲೆಯಲ್ಲಿ ಎರಡು ವಿಶೇಷ ಪೊಲೀಸ್ ತಂಡಗಳು ದುಬೈ ಮತ್ತು ಇಂಗ್ಲೆಡ್‍ಗೆ ಪ್ರಯಾಣ ಬೆಳೆಸಿವೆ.

ಇತ್ತ ಕೂಡಿಟ್ಟ ಹಣವನ್ನು ಐಎಂಎ ಸಂಸ್ಥೆಯಲ್ಲಿ ಹೂಡಿಕೆ ಮಾಡಿ ಕಂಗಾಲಾಗಿರುವ ಸಾವಿರಾರು ಗ್ರಾಹಕರು ಇಂದು ಕೂಡ ಐಎಂಎ ಸಂಸ್ಥೆ ಬಳಿ ಜಮಾಯಿಸಿದ್ದರು.

ಬಡ್ಡಿ ಆಸೆಗಾಗಿ ಕೂಲಿ ನಾಲಿ ಮಾಡಿ ಸಂಪಾದಿಸಿದ ಹಣವನ್ನು ಐಎಂಎ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದೇವೆ. ದಯವಿಟ್ಟು ಮನ್ಸೂರ್‍ನನ್ನು ಎಲ್ಲಿದ್ದರೂ ಹುಡುಕಿ ಕರೆ ತಂದು ನಮಗೆ ಸಹಾಯ ಮಾಡಿ ಎಂದು ನೊಂದ ಗ್ರಾಹಕರು ಪೊಲೀಸರ ಮುಂದೆ ಅಲವತ್ತುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಹಣ ಕಳೆದುಕೊಂಡಿರುವ ಗ್ರಾಹಕರ ಸಂಖ್ಯೆ ದಿನೇ ದಿನೇ ಬೆಳೆಯುತ್ತಿದ್ದಂತೆ ಐಎಂಎ ಸಂಸ್ಥೆ ಒಡೆತನದ ಫ್ರಂಟ್‍ಲೈನ್ ಆಸ್ಪತ್ರೆ ಮತ್ತು ಮೆಡಿಕಲ್ ಸ್ಟೋರ್‍ಗೂ ಬೀಗ ಜಡಿಯಲಾಗಿದೆ.

ಸಂಸ್ಥೆ ಮುಂಭಾಗ ಪ್ರತಿಭಟನೆ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ನೀವು ನಿಮಗೆ ಆಗಿರುವ ಮೋಸದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಹಿರಿಯ ಪೊಲೀಸರು ಮನವಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಇದುವರೆಗೂ 3,000ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ.

ಇಂದೂ ಕೂಡ ನಗರದ ನಾನಾ ಮೂಲೆಗಳಿಂದ ಹಾಗೂ ದಾವಣಗೆರೆಯಿಂದ ನೂರಾರು ಮಂದಿ ಆಗಮಿಸಿ ದೂರು ನೀಡುತ್ತಿದ್ದಾರೆ.

ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಐಎಂಎ ಸಂಸ್ಥೆ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು , ಎಲ್ಲಾ ದೂರುಗಳನ್ನು ಅದೇ ಎಫ್‍ಐಆರ್‍ಗೆ ಪೊಲೀಸರು ಸೇರ್ಪಡೆ ಮಾಡುತ್ತಿದ್ದಾರೆ.

ನಿನ್ನೆ ಪೊಲೀಸ್ ಕಮಿಷನರ್ ಅವರಿಗೆ ವಾಟ್ಸಪ್ ಸಂದೇಶ ರವಾನಿಸಿದ್ದ ಮನ್ಸೂರ್ ನಾನು ನಿಯತ್ತಿನಿಂದ ಸಂಸ್ಥೆ ನಡೆಸಲು ಕೆಲವರು ಬಿಡುತ್ತಿಲ್ಲ. ನನ್ನಿಂದ ಹಣ ಪಡೆದ ಕೆಲ ಬಲಿಷ್ಠ ವ್ಯಕ್ತಿಗಳು ನನಗೆ ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ನನ್ನ ಕುಟುಂಬವನ್ನು ಅಜ್ಞಾತ ಸ್ಥಳದಲ್ಲಿ ಬಿಡುವಂತಾಗಿದೆ. ಈ ಎಲ್ಲಾ ಸಮಸ್ಯೆಗಳಿಂದ ನನಗೆ ಜೀವನ ಸಾಕಾಗಿದ್ದು, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಂಸ್ಥೆಯಲ್ಲಿರುವ 500 ಕೋಟಿ ಆಸ್ತಿಯನ್ನು ಮಾರಾಟ ಮಾಡಿ ಗ್ರಾಹಕರಿಗೆ ಹಂಚಿ ನೀವು ಈ ಸಂದೇಶ ಓದುವುದರೊಳಗೆ ನಾನು ಬದುಕಿರುವುದಿಲ್ಲ ಎಂದು ತಿಳಿಸಿದ್ದ.

ಮನ್ಸೂರ್ ಅವರ ಈ ಸಂದೇಶ ಪೊಲೀಸ್ ಇಲಾಖೆಯನ್ನಲ್ಲದೆ ಕೆಲ ರಾಜಕಾರಣಿಗಳನ್ನು ಬೆಚ್ಚಿ ಬೀಳಿಸಿತ್ತು.

ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಆತನನ್ನು ಸಂಪರ್ಕಿಸಲು ಮಾಡಿದ ಯಾವುದೇ ಪ್ರಯತ್ನಗಳು ಸಫಲವಾಗಿರಲಿಲ್ಲ. ನಾನು ಬೆಂಗಳೂರಿನ ದಕ್ಷಿಣ ವಲಯದಲ್ಲೇ ಇದ್ದೇನೆ ಎಂದು ತಿಳಿಸಿದ್ದ ಮನ್ಸೂರ್ ಮೂರು ದಿನಗಳ ಮುಂಚೆಯೇ ದೇಶ ತೊರೆದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ.

ಈ ಮಾಹಿತಿಯನ್ನಾಧರಿಸಿ ಇಂಗ್ಲೆಂಡ್ ಇಲ್ಲವೆ ದುಬೈಗೆ ತೆರಳಿರಬಹುದು ಎಂದು ಶಂಕಿಸಿರುವ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿ ಆತನ ಬಂಧನಕ್ಕೆ ಕಾರ್ಯಾಚರಣೆಗಿಳಿದಿದ್ದಾರೆ.

ಆ್ಯಪ್ ಕ್ಲೋಸ್: ಐಎಂಎ ಸಂಸ್ಥೆಯ ಹೂಡಿಕೆ ಮತ್ತು ಲಾಭ ಕುರಿತಂತೆ ಮಾಹಿತಿ ನೀಡಲು ಆರಂಭಿಸಲಾಗಿದ್ದ ಮೊಬೈಲ್ ಆ್ಯಪ್ ಸ್ಥಗಿತಗೊಂಡಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

ಆರಂಭದಲ್ಲಿ ಐಎಂಎ ಸಂಸ್ಥೆಯವರು ಮೊಬೈಲ್ ಆ್ಯಪ್ ಮೂಲಕವೇ ಸಂಸ್ಥೆಯ ಎಲ್ಲಾ ಮಾಹಿತಿಗಳನ್ನು ಗ್ರಾಹಕರಿಗೆ ರವಾನಿಸುತ್ತಿದ್ದರು.ಮನ್ಸೂರ್ ನಾಪತ್ತೆಯಾಗುತ್ತಿದ್ದಂತೆ ಮೊಬೈಲ್ ಆ್ಯಪ್ ಸ್ಥಗಿತಗೊಂಡಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ