ಬೆಂಗಳೂರು,ಜೂ.08-ಜಿಂದಾಲ್ ಕಂಪನಿಗೆ ಜಮೀನು ನೀಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರೋಧವನ್ನು ವ್ಯಕ್ತಪಡಿಸುತ್ತಲೇ ಇದೆ. ಈ ಹಿನ್ನಲೆಯಲ್ಲಿ ಬಿಜೆಪಿ ಶಾಸಕ ಸಿ.ಟಿ.ರವಿಯವರು ಸರ್ಕಾರದ ನಡೆಯನ್ನು ಖಂಡಿಸಿ ಮುಖ್ಯಮಂತ್ರಿಗಳಿಗೆ ಹಾಗೂ ಮೈತ್ರಿ ಸರ್ಕಾರದ ಶಾಸಕರುಗಳಿಗೆ ಪತ್ರ ಬರೆಯುವ ಮೂಲಕ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಶ್ರೀ ಸಿದ್ದರಾಮಯ್ಯನವರು ಸಿಎಂ ಆಗಿದ್ದ ಸಂದರ್ಭದಲ್ಲಿ 10 ಎಕರೆ ಮೇಲ್ಪಟ್ಟ ಪ್ರದೇಶವನ್ನು ಯಾವುದೇ ಕೈಗಾರಿಕೆಗೆ ನೀಡುವಾಗ ಸೇಲ್ಡೀಡ್ ಮಾಡದೇ ಧೀರ್ಘಾವಧಿ ಗುತ್ತಿಗೆಗೆ ನೀಡುವ ಮೂಲಕ ಸರ್ಕಾರ ಜಮೀನಿನ ಮೇಲೆ ನಿಯಂತ್ರಣ ಹೊಂದಬೇಕೆಂಬ ಸಂಪುಟ ನಿರ್ಣಯಕ್ಕೆ ವ್ಯತಿರಿಕ್ತವಾಗಿ ಭೂಮಿ ಪರಭಾರೆ ಮಾಡಲು ಹೊರಟಿರುವದರ ಬಗ್ಗೆ ಕಾಂಗ್ರೇಸ್ ಪಕ್ಷದ ನಿಲುವೇನು? ಮಾನ್ಯ ಲೋಕಯುಕ್ತರಾಗಿದ್ದ ಸಂತೋಷ್ ಹಗ್ಡೆ ಅವರು ಅಕ್ರಮ ಗಣಿಕಾರಿಕೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ವರದಿಯಲ್ಲಿ ಜಿಂದಾಲ್ ಕಂಪನಿಯ ಬಗ್ಗೆ ಉಲ್ಲೇಖವೇನು? ಎಂದು ಪ್ರಶ್ನಿಸಿದ್ದಾರೆ.
ಈ ಕಂಪನಿ ಪ್ರಾರಂಭಿಸಿದ ಮೇಲೆ ಸುತ್ತಮುತ್ತಲಿನ ಜನಜೀವನದ ಆರೋಗ್ಯದ ಮೇಲೆ, ಪರಿಸರದ ಮೇಲೆ ಆಗಿರುವ ಪರಿಣಾಮವೇನು? ಇದಕ್ಕೆ ಸಂಬಂಧಿಸಿದಂತೆ ಸೊಷಿಯಲ್ ಆಡಿಟ್ ಆಗಿದೆಯೇ ಮತ್ತು ಪರಿಸರ ಇಲಾಖೆ ವರದಿ ಏನು?
ಕೆಲವು ಮಾಜಿ ಐಎಎಸ್/ಐಪಿಎಸ್ ಅಧಿಕಾರಿಗಳು ಸೇವಾ ನಿವೃತ್ತಿ ನಂತರ ಜಿಂದಾಲ್ ಕಂಪನಿಯಲ್ಲಿ ದೊಡ್ಡ ಮೊತ್ತದ ಸಂಭಳಕ್ಕೆ ಕೆಲಸ ನಿರ್ವಹಿಸುತ್ತಿರುವ ಕುರಿತು ಮಹಿತಿ ಇದೆಯ? ಹಾಗಿದ್ದಲ್ಲಿ ಮಾಜಿ ಮತ್ತು ಹಾಲಿ ಐಎಎಸ್/ಐಪಿಎಸ್ ಅಧಿಕಾರಿಗಳ ಮಾಹಿತಿ ಹಾಗೂ ಅವರು ಅಧಿಕಾರದಲ್ಲಿದ್ದಾಗ ಜಿಂದಾಲ್ ಕಂಪನಿಗೆ ಮಾಡಿದ ಸಹಾಯವೇನು? ಎಂಬುದನ್ನು ಬಹಿರಂಗಪಡಿಸಿ ಎಂದು ಆಗ್ರಹಿಸಿದ್ದಾರೆ.
ಜಿಂದಾಲ್ ಕಂಪನಿ ಮತ್ತು ಇತರೆ ಕಂಪನಿಗಳಿಗೆ 2001ರಿಂದ 20019-10ರವರೆಗೆ ಎಂಎಂಎಲ್ ಮೂಲಕ ಅತ್ಯಂತ ಕಡಿಮೆ ಬೆಲೆಗೆ ಅದಿರು ಸರಬರಾಜು ಮಾಡಿರುವ ಬಗ್ಗೆ ಸಿಎಜಿ ನೀಡಿದ ವರದಿಯೇನು? ನ್ಯಾಯಲಯದಲ್ಲಿ ಇರುವ ವಿವಾದ ಬಗೆಹರಿದಿದೆಯೇ ಎಂದು ಪ್ರಶ್ನಿಸಿದ್ದಾರೆ.