ದಾಸರಹಳ್ಳಿ, ಜೂ.1- ಯುವಜನತೆ ತಂಬಾಕು ವ್ಯಸನಿಗಳಾದರೆ ಇಡೀ ಸಮಾಜವೇ ರೋಗಗ್ರಸ್ತವಾಗುತ್ತದೆ ಎಂದು ಆರ್ಆರ್ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ನಾರಾಯಣಸ್ವಾಮಿ ತಿಳಿಸಿದ್ದಾರೆ.
ಚಿಕ್ಕಬಾಣಾವರದ ಆರ್ಆರ್ ಫಾರ್ಮಸಿ ಕಾಲೇಜು ಆವರಣದಲ್ಲಿ ಎನ್ಎಸ್ಎಸ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳನ್ನು ಬಳಸದಂತೆ ಪ್ರತಿಜ್ಞಾವಿಧಿಯನ್ನು ಬೋಧಿಸಿ ಅವರು ಮಾತನಾಡಿದರು.
ಶೋಕಿಗಾಗಿ ಶುರುವಾಗುವ ಧೂಮಪಾನ, ಚಟವಾಗಿ ಪರಿಣಮಿಸಿ ಕ್ಯಾನ್ಸರ್ ನಂತಹ ಮಾರಕ ರೋಗವನ್ನು ತಂದೊಡ್ಡಿ ಬದುಕು ಭವಿಷ್ಯಕ್ಕೆ ಮಾರಕವಾಗುವ ಅಪಾಯವಿದ್ದು ತಂಬಾಕು ಸೇವನೆಯಿಂದ ವಿದ್ಯಾರ್ಥಿಗಳು ದೂರವಿರಬೇಕೆಂದು ಕಿವಿಮಾತು ಹೇಳಿದರು.
ಈ ವೇಳೆ ತಂಬಾಕು ನಿಮ್ಮ ಉಸಿರನ್ನು ತೆಗೆದುಕೊಂಡು ಹೋಗಲು ಬಿಡಬೇಡಿ ಎಂಬ ಭಿತ್ತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು. ಜತೆಗೆ ಜೀವನದಲ್ಲಿ ಎಂದಿಗೂ ಧೂಮಪಾನ ಮಾಡುವುದಿಲ್ಲ ತಂಬಾಕು ಉತ್ಪನ್ನಗಳನ್ನು ಬಳಸುವುದಿಲ್ಲ ಕುಟುಂಬದವರು ಹಾಗೂ ಪರಿಚಯಸ್ಥರು ತಂಬಾಕನ್ನು ಬಳಸದಂತೆ ತಿಳಿ ಹೇಳುತ್ತೇವೆ.
ಕಾಲೇಜು ಆವರಣವನ್ನು ತಂಬಾಕು ಮುಕ್ತ ಮಾಡುತ್ತೇವೆ ಎಂದು ವಿದ್ಯಾರ್ಥಿಗಳು ಪ್ರತಿಜ್ಞೆಯನ್ನು ಮಾಡಿದರು ಅಲ್ಲದೆ ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಕರಪತ್ರಗಳನ್ನು ಹಂಚುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಡೀನ್ ಡಾ.ಗೋಪಾಲಕೃಷ್ಣ, ಡಾ.ಮಹಾಂತೇಶ್ ಧಾರವಾಡ , ಎನ್ಎಸ್ಎಸ್ ಅಧಿಕಾರಿ ಪ್ರೊ.ಆರ್. ರವೀಂದ್ರ ಮೊದಲಾದವರಿದ್ದರು.