ವೇದ ಉಪನಿಷತ್ತುಗಳಲ್ಲಿ ಮನಸ್ಸನ್ನು ತಹಬಂದಿಗೆ ತರಲು ಪರಿಹಾರಗಳಿವೆ-ಡಾ.ಆರೋಢ ಭಾರತಿ ಮಹಾಸ್ವಾಮೀಜಿ

Varta Mitra News

ಯಶವಂತಪುರ, ಜೂ.1- ಮನಶಾಂತಿ, ನೆಮ್ಮದಿಗೆ ವೇದ, ಉಪನಿಷತ್ತು , ಪುರಾಣ, ಧರ್ಮಗಳ ಸಂದೇಶ-ಸಾರ ದಿವ್ಯೌಷಧವಾಗಿದೆ ಎಂದು ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ. ಆರೂಢ ಭಾರತಿ ಮಹಾಸ್ವಾಮೀಜಿ ತಿಳಿಸಿದ್ದಾರೆ.

ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದಲ್ಲಿ ವಿಕಾಸ ಸಂಗಮ ಶಾಸ್ತ್ರ ಮಂಟಪ, ಶ್ರೀ ಸಿದ್ಧಾರೂಢ ಅಂತಾರಾಷ್ಟ್ರೀಯ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ಮತ್ತು ಬಿಬಿಎಂಪಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವೇದಾಂತ ಶಿಬಿರ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಆಧುನಿಕ ಯುಗದಲ್ಲಿ ದೈಹಿಕ ಕಾಯಿಲೆಗಳನ್ನು ಗುಣಪಡಿಸಲು ನಿಖರ ವೈದ್ಯಕೀಯ ವ್ಯವಸ್ಥೆ ಚಿಕಿತ್ಸೆ ಲಭ್ಯವಿದೆ. ಆದರೆ ಮನುಷ್ಯನ ಏಳಿಗೆಗೆ ತೊಡಕಾಗಿರುವ ಮನೋವ್ಯಾಧಿಗೆ ನಿರ್ದಿಷ್ಟ ಮದ್ದು ಮಾತ್ರೆಗಳಿಲ್ಲ. ವೇದ ಉಪನಿಷತ್ತುಗಳಲ್ಲಿ ಮನಸ್ಸನ್ನು ತಹಬಂದಿಗೆ ತರಲು ಪರಿಹಾರಗಳಿವೆ ಎಂದರು.

ಮನುಷ್ಯ ಬಯಸಿದಂತೆ ಜಗತ್ತು ಇರುವುದಿಲ್ಲ. ಪರರನ್ನು ತನ್ನವರೆಂದು ತಿಳಿದುಕೊಳ್ಳುವಂತೆ ಮನಸ್ಸನ್ನು ಅಣಿಗೊಳಿಸಿದರೆ ಮಾನಸಿಕ ಕ್ಷೋಭೆ ತನ್ನಿಂತಾನೇ ದೂರವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಕಮಲ ನೀರಿನಲ್ಲಿದ್ದರೂ ನೀರಿಗೆ ಅಂಟಿ ಕೊಂಡಿರುವುದಿಲ್ಲ ಅಂತೆಯೇ ತೊಂದರೆ ತಾಪತ್ರಯ, ನೋವು ನಷ್ಟಗಳಿದ್ದರೂ ಗಣನೆಗೆ ತೆಗೆದುಕೊಳ್ಳದೆ ಬಂದದ್ದನ್ನು ಬಂದ ಹಾಗೆ ನಿರ್ಲಿಪ್ತವಾಗಿ ಸ್ವಿಕರಿಸಿದರೆ ಬದುಕು ಭಾರವಾಗುವುದಿಲ್ಲ. ಜತೆಗೆ ಮನುಷ್ಯ ಯಾವುದರಿಂದ ತೊಂದರೆ, ಹಿಂಸೆ ಅನುಭವಿಸುತ್ತಾನೊ ಅದನ್ನು ಬೇರೆಯವರಿಗೆ ಮಾಡದಿದ್ದರೆ ನೆಮ್ಮದಿಗೆ ಭಂಗ ಬರುವುದಿಲ್ಲ ಎಂದು ಕಿವಿಮಾತು ಹೇಳಿದರು.

ಲಾಭ-ನಷ್ಟ ಹಾಗೂ ಕಷ್ಟ-ಸುಖ ಒಂದೇ ನಾಣ್ಯದ ಮುಖಗಳೆಂದು ತಿಳಿದಿದ್ದರೂ ಸದಾ ಸುಖ ಲಾಭವನ್ನೇ ಬಯಸಿದರೆ ಮನೋವ್ಯಾಧಿ ಬರುತ್ತದೆ. ಕಷ್ಟ ಬಂದಾಗ ಕುಗ್ಗದ, ಸುಖ ಬಂದಾಗ ಹಿಗ್ಗದ ಸಮಚಿತ್ತದ ಮನಸ್ಥಿತಿಗೆ ತಲುಪಲು ವೇದಾಂತ ಶಿಬಿರಗಳು ತುಂಬಾ ಸಹಕಾರಿ ಎಂದು ತಿಳಿಸಿದರು.

ಇಪ್ಪತ್ತು ದಿನಗಳ ಕಾಲ ನಿರಂತರವಾಗಿ ನಡೆದ ವೇದಾಂತ ಶಿಬಿರದಲ್ಲಿ ನಾಡಿನ ಸಾಧು ಸಂತರು, ಶರಣರು, ವಿವಿಧ ಮಠಗಳ ಸ್ವಾಮೀಜಿಗಳು ಪಾಲ್ಗೊಂಡು ಮುಮುಕ್ಷುಗಳಿಗೆ ವೇದ ಉಪನಿಷತ್ತು ಪುರಾಣಕ್ಕೆ ಸಂಬಂಧಿಸಿದ ಉಪನ್ಯಾಸ ನೀಡಿದರು.

ಸಂಸ್ಕøತ ವ್ಯಾಕರಣ ಅಲ್ಲದೆ ಯೋಗ ಹಾಗೂ ಸಿರಿಧಾನ್ಯಗಳ ಪ್ರಾಕೃತಿಕ ಆಹಾರ ಪದ್ಧತಿಗಳನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ಮನಸ್ಸಿನ ದುಗುಡವನ್ನು ದೂರ ಸರಿಸಲು ಶಿಬಿರ ನೆರವಾಗಿದೆ ಎಂದು ಶಿಬಿರಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ನೆ.ಲ.ನರೇಂದ್ರ ಬಾಬು, ಶ್ರೀ ಭೀಮಾನಂದ ಸ್ವಾಮೀಜಿ, ಅಮೋಘಾನಂದ ಶಾಸ್ತ್ರಿ , ಶ್ರೀ ಆದಿ ದೇವಾನಂದಗಿರಿ ಮಹಾಸ್ವಾಮೀಜಿ , ಶ್ರೀ ದೇನಾಭಗತ್ ಸ್ವಾಮೀಜಿ, ಶ್ರೀ ಡಾ.ಆನಂದಮೂರ್ತಿ ಸ್ವಾಮೀಜಿ , ಶ್ರೀ ಈಶ್ವರಾನಂದ ಸ್ವಾಮೀಜಿ, ಶ್ರೀ ದಯಾನಂದ ಸ್ವಾಮೀಜಿ, ಶ್ರೀ ಸಂಧ್ಯಾನಂದ ಸ್ವಾಮೀಜಿ, ಸತ್ಯಮೇಧ ಮಾತಾ, ಕಾತ್ಯಾಯಿನಿ ಮಾತಾ, ಮುನಿಯಪ್ಪ ಗುರುರಾಜ್, ಲಲಿತಮ್ಮ , ಗಂಗಾಧರ್ ಸೇರಿ ಮುಮುಕ್ಷುಗಳು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ