ಮೆಜೆಸ್ಟಿಕ್​ ರೈಲ್ವೆ ನಿಲ್ದಾಣದಲ್ಲಿ ಗ್ರೆನೇಡ್​ ದೊರೆತ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​!

ಬೆಂಗಳೂರು : ಮೆಜೆಸ್ಟಿಕ್​ನಲ್ಲಿ ಪತ್ತೆಯಾದ ಗ್ರೆನೇಡ್ ಪ್ರಕರಣಕ್ಕೆ ಹೊಸ ಟ್ವಿಸ್ಟ್​ ಸಿಕ್ಕಿದೆ. ಹೊಸದಾಗಿ ಬಂದ ಮಹಿಳಾ ಅಧಿಕಾರಿಯನ್ನು ಕಟ್ಟಿ ಹಾಕಲು ಈ ರೀತಿ ಸಂಚು ನಡೆದಿತ್ತು ಎನ್ನುವ ವಿಚಾರ ರೈಲ್ವೇ ಉನ್ನತ್ತ ಮೂಲಗಳಿಂದ ಲಭ್ಯವಾಗಿದೆ.

ಶುಕ್ರವಾರ ಬೆಳಗ್ಗೆ ಕಂಟ್ರಿಮೇಡ್​ ಗ್ರೆನೇಡ್ ದೊರೆತಿತ್ತು. ಇದು ನಕಲಿ ಎಂದು ಪ್ರಾಥಮಿಕ ವರದಿಯಲ್ಲಿ ದೃಢಪಟ್ಟಿತ್ತು. ಆದರೆ, ಗ್ರೆನೇಡ್​ ಇಡಲಾದ ಹಿಂದಿನ ಉದ್ದೇಶ ಬೆರೇಯೇ ಇತ್ತು ಎನ್ನಲಾಗಿದೆ. 3 ತಿಂಗಳ ಹಿಂದೆಯಷ್ಟೇ ದೇಬಾ ಸ್ಮಿತಾ ಚಟ್ಟೋಪಾಧ್ಯಾಯ ಬ್ಯಾನರ್ಜಿ ಆರ್​ಪಿಎಫ್​ನ ಡಿವಿಶನ್​ ಸೆಕ್ಯುರಿಟಿ ಕಮಿಷನರ್​ ಅಧಿಕಾರ ವಹಿಸಿಕೊಂಡಿದ್ದರು. ದೇಬಾ ಸ್ಮಿತಾಗೆ ಕಪ್ಪುಚುಕ್ಕೆ ತರಲು ಆರ್​​ಪಿಎಫ್ ಸಿಬ್ಬಂದಿಯಿಂದಲೇ ಗ್ರೆನೇಡ್ ಇಟ್ಟಿರುವ ಶಂಕೆ ವ್ಯಕ್ತವಾಗಿದೆ.

ರೈಲ್ವೇ ಇಲಾಖೆಯಲ್ಲಿ ಹೀಗೊಂದು ಮಾತು ಕೇಳಿಬರುತ್ತಿದೆ. ಬಾಂಬ್​ ಪತ್ತೆಯಾದ ವೇಳೆ ಸಿಸಿಟಿವಿ ಪರೀಕ್ಷಿಸಿದಾಗ ಅದು ಆಫ್​ ಆಗಿರುವ ವಿಚಾರ ಬೆಳಕಿಗೆ ಬಂದಿತ್ತು. ಹಾಗಾಗಿ, ಸಿಬ್ಬಂದಿಯೇ ಸಿಸಿಟಿವಿ ಆಫ್ ಮಾಡಿದ್ದರು ಎನ್ನುವ ಅನುಮಾನ ಮೂಡಿದೆ.

ಶುಕ್ರವಾರ ಬೆಳಗ್ಗೆಯೇ ಪೊಲೀಸ್​ ಇಲಾಖೆಗೆ ಅನಾಮಿಕ ಕರೆ ಬಂದಿತ್ತು. ಈ ಕರೆಯಲ್ಲಿ ಬೆಂಗಳೂರಿನಿಂದ ಪಾಟ್ನಾ ತೆರಳುವ ಸಂಘಮಿತ್ರ ಎಕ್ಸ್​ಪ್ರೆಸ್ ರೈಲಿನಲ್ಲಿ ಬಾಂಬ್​ ಇಡಲಾಗಿದೆ ಎಂಬ ಎಚ್ಚರಿಕೆ ನೀಡಲಾಗಿತ್ತು. ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಅಧಿಕಾರಿಗಳು ತಕ್ಷಣವೇ ಶ್ವಾನದಳದೊಂದಿಗೆ ಸ್ಥಳಕ್ಕೆ ಆಗಮಿಸಿ ಪ್ರಯಾಣಿಕರನ್ನು ರೈಲಿನಿಂದ ಕೆಳಗಿಳಿಸಿ ತಪಾಸಣೆ ನಡೆಸಿದ್ದರು. ಈ ವೇಳೆ ರೈಲ್ವೆ ನಿಲ್ದಾಣದ ಪ್ಲಾಟ್​ಫಾರಂ 1 ರ ರೈಲ್ವೆ ಹಳಿಯ ಮೇಲೆ ಕಂಟ್ರಿಮೇಡ್ ಗ್ರೆನೇಡ್ ಪತ್ತೆಯಾಗಿತ್ತು. ಇದರ ಜೊತೆಗೆ ರೈಲಿನಲ್ಲಿ ಕೆಲ ಅನುಮಾನಾಸ್ಪದ ವಸ್ತುಗಳು ಸಹ ಪತ್ತೆಯಾಗಿದ್ದವು. ಇದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ನಂತರ ಸ್ಥಳಕ್ಕಾಗಮಿಸಿದ ಬಾಂಬ್​ ನಿಷ್ಕ್ರಿಯ ದಳದ ಅಧಿಕಾರಿಗಳು ಸ್ಫೋಟಕ ವಸ್ತುವನ್ನು ಅಲ್ಲಿಂದ ಸುರಕ್ಷಿತವಾಗಿ ಸ್ಥಳಾಂತರಿಸಿ ಸ್ಫೋಟಕದ ಮಾದರಿಯ ಕುರಿತು ಪರಿಶೀಲನೆ ನಡೆಸಿದ್ದರು. ಈ ವೇಳೆ ಅದು ನಕಲಿ ಬಾಂಬ್​ ಎಂದು ತಿಳಿದು ಬಂದಿತ್ತು. ಈ ವೇಳೆ ಗೃಹಸಚಿವ ಎಂ.ಬಿ. ಪಾಟೀಲ್ ಸ್ಥಳಕ್ಕೆ ಆಗಮಿಸಿ ಪೊಲೀಸರಿಂದ ಸಂಪೂರ್ಣ ಮಾಹಿತಿ ಪಡೆದಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ