ಬೆಂಗಳೂರು,ಜೂ.1- ರಾಜ್ಯದಲ್ಲಿ ಮಳೆಬೆಳೆ ಸಮೃದ್ದಿಯಾಗಿ ಬರಲೆಂದು ಪ್ರಾರ್ಥಿಸಿ ರಾಜ್ಯ ಸಮ್ಮಿಶ್ರ ಸರ್ಕಾರ ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲು ಆದೇಶ ಹೊರಡಿಸಿದೆ.
ಜೂ.6ರಂದು ಧಾರ್ಮಿಕ ಇಲಾಖೆಯ ಪ್ರಮುಖ ದೇವಸ್ಥಾನಗಳಲ್ಲಿ ಪರ್ಜನ್ಯ ಜಪ ಮತ್ತು ವಿಶೇಷ ಪೂಜೆ ನಡೆಸುವಂತೆ ಮುಜರಾಯಿ ಇಲಾಖೆ ಆದೇಶ ನೀಡಿದೆ.
ಅಂದು ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆಗಳನ್ನು ನಡೆಸಬೇಕು. ಪೂಜೆಯ ವೆಚ್ಚ 10,001 ರೂ.ಮೀರದಂತೆ ನೋಡಿಕೊಳ್ಳಬೇಕು. ಆರ್ಥಿಕವಾಗಿ ಸದೃಢವಾಗಿರುವ ದೇವಾಲಯಗಳಲ್ಲಿ ಸ್ಥಳೀಯ ನಿಧಿಯಿಂದಲೇ ಪೂಜೆಯ ವೆಚ್ಚ ಭರಿಸಬೇಕೆಂದು ಸೂಚಿಸಲಾಗಿದೆ.
ರಾಜ್ಯದಲ್ಲಿ ಸಕಾಲಕ್ಕೆ ಮಳೆ-ಬೆಳೆಯಾಗದೆ ಜನಜಾನುವಾರುಗಳ ಕುಡಿಯುವ ನೀರಿನ ಅಭಾವ ಹೆಚ್ಚಾಗಿದೆ. ರಾಜ್ಯದಲ್ಲಿ ಸುವೃಷ್ಟಿ ಉಂಟಾಗಿ ಬೆಳೆಗಳು ಸಮೃದ್ದಿಯಾಗಿ ರಾಜ್ಯ ಸುಭಿಕ್ಷವಾಗಿರಲು ಮೊದಲಿಂದಲೂ ವಿಶೇಷ ಪೂಜೆ ಪ್ರಾರ್ಥನೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.
ಪ್ರಸಕ್ತ ಬರಗಾಲದಿಂದ ಪಾರಾಗಲು ಪರ್ಜನ್ಯ ಜಪ ಹಾಗೂ ವಿಶೇಷ ಪೂಜೆ ಅಗತ್ಯವೆಂದು ಸರ್ಕಾರ ಮನಗಂಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.