ಬೆಂಗಳೂರು, ಜೂ.1-ಸರ್ಕಾರದ ಯಾವುದೇ ಭೂಮಿ ಮತ್ತು ಕಟ್ಟಡಗಳನ್ನ ಮಾರಾಟ ಮಾಡುವ ತೀರ್ಮಾನವನ್ನು ಮುಖ್ಯಮಂತ್ರಿಗಳು ತಕ್ಷಣವೇ ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಈಗಾಗಲೇ ಜಿಂದಾಲ್ನವರು ಸರ್ಕಾರದ ಎಂ.ಎಂ.ಲ್. ಕಂಪನಿಗೆ 1300ಕೋಟಿ ರೂಪಾಯಿಯಷ್ಟು ನೀಡಬೇಕಾಗಿದ್ದು ಅಲ್ಲಿಯ ಪ್ರಾಧಿಕಾರಕ್ಕೆ ನೀಡಬೇಕಾದ ಹಣ ಪಾವತಿಸದೆ ರಾಜಕಾರಣಿಗಳ ಕೃಪಾಕಟಾಕ್ಷದಿಂದ ಅನೇಕ ಅಕ್ರಮಗಳನ್ನು ನಡೆಸುತ್ತಲೆ ಬಂದಿದೆ. ಈ ಬಗ್ಗೆ ಮಾಜಿ ಲೋಕಾಯುಕ್ತರು ತನಿಖೆ ಮಾಡಿ ಸದರಿ ಕಂಪನಿಯನ್ನು ಕಪ್ಪು ಪಟ್ಟಿಯಲ್ಲಿ ಇರಿಸಲಾಗಿದೆ. ಇಂತಹ ಕಂಪನಿಯ ಜೊತೆ ಸರ್ಕಾರ ವ್ಯವಹಾರ ನಡೆಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಸರ್ಕಾರವೇ ನೀಡಿದಂತಹ 3666 ಎಕರೆ ಜಮೀನನ್ನು ಶುದ್ಧ ಕ್ರಯಕ್ಕೆ ಒಂದು ಎಕರೆಗೆ 1.50 ಲಕ್ಷ ರೂ.ಗಳಂತೆ ಮಾರಾಟ ಮಾಡಲು ಹೊರಟಿರುವುದು ಸರಿಯಲ್ಲ.
ಈ ಭಾಗದಲ್ಲಿ ಭೂಮಿ ಬೆಲೆ ಒಂದು ಎಕರೆಗೆ ಕನಿಷ್ಠ 25 ಲಕ್ಷದಿಂದ 1 ಕೋಟಿ ರೂ ಇರುತ್ತದೆ. ಆದರೆ ಕನಿಷ್ಠ ದರಕ್ಕೆ ಜಿಂದಾಲ್ಗೆ ಭೂಮಿ ಮಾರಾಟ ಮಾಡಲು ಹೊರಟಿರುವ ಸರ್ಕಾರದ ಧೋರಣೆಯನ್ನು ಎಲ್ಲರೂ ಖಂಡಿಸಬೇಕು ಎಂದು ಹೇಳಿದರು.
ಈ ಒಪ್ಪಂದವನ್ನು ಸರ್ಕಾರ ಕೂಡಲೇ ರದ್ದು ಮಾಡಬೇಕು. ಇಲ್ಲವಾದರೆ ರೈತ, ದಲಿತ ಸಂಘಟನೆಗಳು, ಪ್ರಗತಿಪರ ಹೋರಾಟಗಾರರು ಮತ್ತಿತರ ಸಂಘಟನೆಗಳ ಜೊತೆಗೂಡಿ ಹೋರಾಟ ನಡೆಸುತ್ತೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದರು.