ರಾಜ್ಯದಲ್ಲಿ ಪರಭಾಷೆಯವರ ಸಂಖ್ಯೆ ಹೆಚ್ಚಾಗುತ್ತಿದ್ದು, ಮೂಲೆಗುಂಪಾಗುತ್ತಿರುವ ಕನ್ನಡಿಗರು-ವಾಟಾಳ್ ನಾಗರಾಜ್

ಬೆಂಗಳೂರು, ಜೂ.1-ಕರ್ನಾಟಕದಲ್ಲಿ ಸಂಪೂರ್ಣ ಪರಭಾಷೆಯವರ ಸಂಖ್ಯೆ ಹೆಚ್ಚಾಗುತ್ತಿದ್ದು, ಕನ್ನಡದವರು ಮೂಲೆ ಗುಂಪಾಗುತ್ತಿದ್ದಾರೆ. ಆದ್ದರಿಂದ ಕನ್ನಡಿಗರ ಅಸ್ತಿತ್ವ, ಭವಿಷ್ಯಕ್ಕಾಗಿ ನಿರಂತರ ಚಳವಳಿ ಅನಿವಾರ್ಯ ಎಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.

ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಕನ್ನಡ ಚಳುವಳಿ ವಾಟಾಳ್ ಪಕ್ಷದ ವತಿಯಿಂದ ಆಯೋಜಿಸಿದ್ದ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡದ ಅಳಿವಿನ ಉಳಿನ ಪ್ರಶ್ನೆ ಎದುರಾಗಿದೆ. ನಗರದಲ್ಲಿ ಕನ್ನಡಿಗರ ಪರಿಸ್ಥಿತಿ ಹೀನಾಯವಾಗಿದ್ದು ಅವರು ತಮ್ಮ ಬದುಕಾಗಿ ತಮ್ಮ ರಾಜ್ಯದಲ್ಲೇ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಭಾಷೆಯರೇ ನಗರದಲ್ಲಿ ಹೆಚ್ಚಾಗಿ ಅಸ್ತಿತ್ವ ಪಡೆಯುತ್ತಿದ್ದು ಕನ್ನಡಿಗರು ಮೂಲೆಗುಂಪಾಗುತ್ತಿದ್ದಾರೆ ಎಂದು ಆರೋಪಿಸಿದರು.

ಬ್ಯಾಂಕ್‍ಗಳಲ್ಲಿ ಕನ್ನಡ ಇಲ್ಲ ಹಾಗೂ ಕನ್ನಡಿಗರಿಗೂ ಉದ್ಯೋಗವಿಲ್ಲ. ಹೊಟೇಲ್‍ಗಳಲ್ಲಿ ಪರಭಾಷಿಗರೇ ಕೆಲಸ ಮಾಡುತ್ತಿದ್ದಾರೆ. ವೈದ್ಯಕೀಯ ತಾಂತ್ರಿಕ ಕಾಲೇಜುಗಳಲ್ಲಿ ನೂರಕ್ಕೆ ನೂರಷ್ಟು ಪರಭಾಷೆಯವರ ದಾಂಧಲೆ ಮಾಡುತ್ತಿದ್ದಾರೆ. ಮನೆಕೆಲಸ, ರಸ್ತೆ ಬದಿ ವ್ಯಾಪಾರ ಮಾಡುವವರು ಹೊರ ರಾಜ್ಯದವರು ಎಂದರು.

ಆದ್ದರಿಂದ ಬ್ಯಾಂಕಿನ ಸಂಪೂರ್ಣ ವ್ಯವಹಾರ ಕನ್ನಡದಲ್ಲಿರಬೇಕು. ರೈಲ್ವೆಯಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು. ಚಿನ್ನದಂಗಡಿ ಬೆಳ್ಳಿಯಂಗಡಿ ಗಿರಿವಿ ಅಂಗಡಿ ಬಟ್ಟೆ ಅಂಗಡಿ ಲೇವಾದೇವಿ ಎಲ್ಲಾ ಕಡೆ ಕನ್ನಡಿಗರಿರಬೇಕು. ವಿಮಾನ ನಿಲ್ದಾಣದಲ್ಲಿ ಕನ್ನಡವನ್ನು ಬಳಸಬೇಕು ಎಂದು ಒತ್ತಾಯಿಸಿದರು.

ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿವಿಧ ಹೋರಾಟಗಳನ್ನು ಹಮ್ಮಿಕೊಳ್ಳಲಾಗಿದೆ. ಜೂ.10 ರಂದು ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಿ ದೊಡ್ಡಬಳ್ಳಾಪುರದಲ್ಲಿರುವ ಕಾರ್ಖಾನೆಗಳಿಗೆ ಮುತ್ತಿಗೆ ಹಾಕಲಾಗುವುದು. ಜೂ.22 ಬ್ಯಾಂಕ್‍ಗಳಲ್ಲಿ ಎಲ್ಲಾ ವ್ಯವಹಾರಗಳನ್ನು ಕನ್ನಡದಲ್ಲೇ ನಡೆಯುವಂತೆ ಒತ್ತಾಯಿಸಿ ಕೆಂಪೇಗೌಡ ರಸ್ತೆಯಲ್ಲಿರುವ ಬ್ಯಾಂಕ್‍ಗಳಿಗೆ ಮುತ್ತಿಗೆ ಹಾಕಲಾಗುವುದು.3666 ಎಕರೆಯನ್ನು ಸರ್ಕಾರ ಪರಭಾರೆ ಮಾಡುತ್ತಿರುವುದನ್ನು ಖಂಡಿಸಿ ಜೂನ್ ಕೊನೆಯ ವಾರದಲ್ಲಿ ಬಳ್ಳಾರಿಯ ಜಿಲ್ಲಾಧಿಕಾರಿಯ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಕನ್ನಡ ಚಳುವಳಿ ವಾಟಾಳ್ ಪಕ್ಷದ ಪದಾಧಿಕಾರಿಗಳಾದ ಮುಬಾರಕ್ ಜಾಫರ್ ನಾರಾಯಣ ಸ್ವಾಮಿ ರಾಜು ಸೇರಿದಂತೆ ಮುಂತಾದವರು ಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ