
ಲಾಹೋರ್, ಮೇ 31-ಮುಂಬೈ ಭಯೋತ್ಪಾದನೆ ದಾಳಿಯ ಕುತಂತ್ರಿ ಹಫೀಜ್ ಸಯೀದ್ ನೇತೃತ್ವದ ಜಮಾತ್-ಉದ್-ದವಾ (ಜೆಯುಡಿ) ಉಗ್ರಗಾಮಿ ಸಂಘಟನೆಯ ಮೂವರು ಸದಸ್ಯರನ್ನು ಪಾಕಿಸ್ತಾನ ಪೊಲೀಸರು ಪಂಜಾಬ್ ಪ್ರಾಂತ್ಯದಲ್ಲಿ ಬಂಧಿಸಿದ್ದಾರೆ.
ಪಾಕ್ನ ಪಂಜಾಬ್ ಪ್ರಾಂತ್ಯದಲ್ಲಿ ಭಯೋತ್ಪಾದನೆ ಚಟುವಟಿಕೆಗಳಿಗೆ ಹಣ ಪೂರೈಸುತ್ತಿದ್ದ ಈ ಮೂವರು ಹುಗ್ರರಿಂದ ಕೋಟ್ಯಂತರ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜೆಯುಡಿ ಸೇರಿದಂತೆ ಕುಪ್ರಸಿದ್ಧ ಉಗ್ರಗಾಮಿ ಸಂಘಟನೆಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಪಾಕಿಸ್ತಾನ ಸರ್ಕಾರದ ಮೇಲೆ ಜಾಗತಿಕವಾಗಿ ವ್ಯಾಪಕ ಒತ್ತಡಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಭಯೋತ್ಪಾದನೆ ನಿಗ್ರಹ ಇಲಾಖೆ ಅಧಿಕಾರಿಗಳು ಈ ಕಾರ್ಯಾಚರಣೆ ಕೈಗೊಂಡಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಲಾಹೋರ್ನಿಂದ 150 ಕಿ.ಮೀ. ದೂರದಲ್ಲಿರುವ ಫೈಸ್ಲಾಬಾದ್ ಅಡಗುದಾಣದ ಮೇಲೆ ದಾಳಿ ನಡೆದ ಸಿಟಿಟಿ ಸಿಬ್ಬಂದಿ ಮೂವರು ಜೆಯುಡಿ ಉಗ್ರರನ್ನು ಬಂಧಿಸಿದರು.
ಭಯೋತ್ಪಾದನೆ ಕೃತ್ಯಗಳಿಗೆ ಹಣಕಾಸು ಸಂಗ್ರಹಿಸಿ ತಮ್ಮ ಬಳಿ ಇಟ್ಟುಕೊಟ್ಟಿದ್ದ ಕೋಟ್ಯಂತರ ರೂ.ಗಳನ್ನು ಬಂಧಿತ ಉಗ್ರರಿಂದ ವಶಪಡಿಸಿಕೊಳ್ಳಲಾಗಿದೆ ಎಂತು ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವಾರ ಪಾಕಿಸ್ತಾನ ಪೊಲೀಸರು ಪಂಜಾಬ್ನಲ್ಲಿ ಇದೇ ಆರೋಪದ ಮೇಲೆ ಕುಖ್ಯಾತ ಉಗ್ರಗಾಮಿ ಬಣ ಜೈಷ್-ಎ-ಮಹಮ್ಮದ್ (ಜೆಇಎಂ)ಗೆ ಸೇರಿದ 10 ಭಯೋತ್ಪಾದಕರನ್ನು ಬಂಧಿಸಿದ್ದರು.