ಇಂದು ಸಂಜೆ ಎನ್‍ಡಿಎ ಸರ್ಕಾರದ ಪ್ರಪ್ರಥಮ ಸಚಿವ ಸಂಪುಟ ಸಭೆ

ನವದೆಹಲಿ, ಮೇ 31-ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೂತನ ಎನ್‍ಡಿಎ ಸರ್ಕಾರದ ಪ್ರಪ್ರಥಮ ಸಚಿವ ಸಂಪುಟ ಸಭೆ ಇಂದು ಸಂಜೆ ರಾಜಧಾನಿಯ ಸಂಸತ್ ಭವನದಲ್ಲಿ ನಡೆಯಲಿದೆ.

ಮೋದಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚೊಚ್ಚಲ ಸಂಸತ್ ಅಧಿವೇಶನ, ಬಜೆಟ್ ಮಂಡನೆ ದಿನಾಂಕ ಸೇರಿದಂತೆ ಕೆಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.

ಹದಿನೇಳನೆ ಲೋಕಸಭೆಯ ಉಭಯ ಮಂಡಲಗಳ ಅಧಿವೇಶನವನ್ನು ಜೂನ್ 6 ರಿಂದ 15ರವರೆಗೆ ನಡೆಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಜೂನ್ 6ರಂದು ಸಂಸತ್ತಿನ ಉಭಯ ಮಂಡಲಗಳ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಮಾಡುವರು. ನಂತರ ಹಂಗಾಮಿ ಲೋಕಸಭಾಧ್ಯಕ್ಷರ ಆಯ್ಕೆ ನಡೆಯಲಿದೆ. ಪಕ್ಷದ ಹಿರಿಯ ನಾಯಕಿ ಮನೇಕಾ ಗಾಂಧಿ ಮಧ್ಯಂತರ ಸ್ಪೀಕರ್ ಆಗಿ ನೇಮಕವಾಗಲಿದ್ದಾರೆ. ನಂತರ ಅವರು 543 ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸುವರು.

ಜೂನ್ 10ರಂದು ಎನ್‍ಡಿಎ ಸರ್ಕಾರ ಚೊಚ್ಚಲ ಬಜೆಟ್ ಮಂಡನೆಯಾಗುವ ಸಾಧ್ಯತೆ ಇದ್ದು, ಅದಕ್ಕೂ ಮುನ್ನ ಪೂರ್ಣಪ್ರಮಾಣದ ಸ್ವೀಕರ್ ಆಯ್ಕೆಯಾಗಲಿದೆ ಎಂದು ಮೂಲಗಳು ಹೇಳಿವೆ.

ಎರಡನೇ ಬಾರಿ ಅಧಿಕಾರಕ್ಕೆ ಬಂದಿರುವ ಎನ್‍ಡಿಎ ಸರ್ಕಾರವನ್ನು ಅತ್ಯಂತ ಸಮರ್ಥ ಮತ್ತು ದಕ್ಷತೆಯಿಂದ ಮುನ್ನಡೆಸಿಕೊಂಡು ಹೋಗಲು ಕಂಕಣಬದ್ದವಾಗಿರುವಂತೆ ಪ್ರಧಾನಿ ಮೋದಿ 57 ನೂತನ ಸಚಿವರಿಗೆ ಮೊದಲ ಸಚಿವ ಸಂಪುಟ ಸಭೆಯಲ್ಲಿ ಸಲಹೆ ಮಾಡಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ