ದೇಶದಲ್ಲಿ ಈ ವರ್ಷ ಮುಂಗಾರಿನಲ್ಲಿ ಸಾಮಾನ್ಯ ಮಳೆ

ನವದೆಹಲಿ, ಮೇ 31-ದೇಶದಲ್ಲಿ ಈ ಬಾರಿ ವರ್ಷ ಋತುವಿನ ನೈರುತ್ಯ ಮುಂಗಾರಿನಲ್ಲಿ ಸಾಮಾನ್ಯ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಜೂನ್‍ನಿಂದ ಸೆಪ್ಟೆಂಬರ್‍ವರೆಗೆ ದೇಶದಲ್ಲಿ ನೈರುತ್ಯ ಮುಂಗಾರಿನಲ್ಲಿ ಮಳೆ ಪ್ರಮಾಣದ ಬಗ್ಗೆ ಇಂದು ಅಧಿಕೃತ ಮುನ್ಸೂಚನೆ ನೀಡಿರುವ ಇಲಾಖೆಯು ಈ ಅವಧಿಯಲ್ಲಿ ಸಾಮಾನ್ಯವಾಗಿ ಅಂದರೆ ಶೇ.96 ರಿಂದ ಶೇ.104ರಷ್ಟು ಮಳೆಯಾಗಲಿದೆ ಎಂದು ವಿವರಿಸಿದೆ.

ದೇಶದ ಪ್ರಾಂತ್ಯವಾರು ವರ್ಷಧಾರೆ ಬಗ್ಗೆ ಮಾಹಿತಿ ನೀಡಿರುವ ಇಲಾಖೆ ವಾಯುವ್ಯ ಭಾರತದಲ್ಲಿ ಶೇ.96, ಮಧ್ಯಭಾರತದಲ್ಲಿ ಶೇ.100, ದಕ್ಷಿಣ ದ್ವೀಪಕಲ್ಪ ಪ್ರದೇಶದಲ್ಲಿ ಶೇ.91 ಹಾಗೂ ಈಶಾನ್ಯ ಭಾರತದಲ್ಲಿ ಕಳೆದ ನೈರುತ್ಯ ಮುಂಗಾರು ಮಳೆಗಿಂತ ಶೇ.8 ರಷ್ಟು ಹೆಚ್ಚು ಅಥವಾ ಕಡಿಮೆ ಮಳೆಯಾಗಲಿದೆ ಎಂದು ತಿಳಿಸಿದೆ.

ದೇಶದಲ್ಲಿ ಜುಲೈ ಮತ್ತು ಆಗಸ್ಟ್‍ನಲ್ಲಿ ಅನುಕ್ರಮವಾಗಿ ಶೇ.95 ಮತ್ತು ಶೇ.99ರಷ್ಟು ನೈರುತ್ಯ ಮುಂಗಾರು ಮಳೆ ಸುರಿಯಲಿದೆ.

ಪ್ರಸ್ತುತ ದುರ್ಬಲವಾಗಿರುವ ಎಲ್ ನಿನೋ ಚಂಡಮಾರುತ ಪೆಸಿಫಿಕ್ ಪ್ರಾಂತ್ಯದಲ್ಲಿ ಈ ಮುಂಗಾರು ಋತುವಿನ ವೇಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ