ದೇವೇಗೌಡರು ಮತ್ತು ಮಲ್ಲಿಕಾರ್ಜುನ ಖರ್ಗೆಯವರು ಸೋತಿರುವುದಕ್ಕೆ ದುಃಖವಾಗಿದೆ-ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಮೇ 28-ಲೋಕಸಭೆ ಚುನಾವಣೆಯ ಫಲಿತಾಂಶ ನನಗೆ ದಿಗ್ಭ್ರಮೆ ಮೂಡಿಸಿದೆ. ಇದು ನಿರೀಕ್ಷಿಸದಿರುವ ಸೋಲು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಆಘಾತ ವ್ಯಕ್ತಪಡಿಸಿದ್ದಾರೆ.

ಸದಾಶಿವನಗರದ ತಮ್ಮ ಮನೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10 ಮಂದಿ ಕಾಂಗ್ರೆಸ್ ಸಂಸದರ ಪೈಕಿ 9 ಮಂದಿ ಸೋಲು ಕಂಡಿದ್ದಾರೆ.

ಅದರಲ್ಲೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಸೋತಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ.

ಅವರುಗಳ ಹೋರಾಟಕ್ಕೆ ಚರಿತ್ರೆಯೇ ಇದೆ. ಅದು ಇತಿಹಾಸ ಸೇರಿಬಿಡುತ್ತದೆಯೇ ಎಂಬ ಆತಂಕವಾಗಿದೆ. ನನಗೆ ನನ್ನ ಸಹೋದರ ಡಿ.ಕೆ.ಸುರೇಶ್ ಗೆದ್ದಿರುವುದಕ್ಕೆ ಸಂತೋಷ ಇಲ್ಲ. ದೇವೇಗೌಡರು, ಮಲ್ಲಿಕಾರ್ಜುನ್ ಖರ್ಗೆ ಅವರಂತಹವರು ಸೋತಿರುವುದಕ್ಕೆ ದುಃಖವಿದೆ.ಅದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ಹೇಳಿದರು.

ಮೈತ್ರಿಯಿಂದ ಚುನಾವಣೆಯಲ್ಲಿ ಹಿನ್ನಡೆಯಾಯಿತು ಎಂಬುದಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ನಾನು ಕೆಲ ವಿಷಯಗಳನ್ನು ಮಾತನಾಡಲು ಬಯಸುವುದಿಲ್ಲ. ಹೈಕಮಾಂಡ್ ಮಾತನಾಡಬಾರದು ಎಂಬ ಸೂಚನೆ ನೀಡಿದೆ.

ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ಕೊಡುವುದಾಗಿ ನಾವು ಭರವಸೆ ಕೊಟ್ಟಿದ್ದೆವು.ಅದರಂತೆ ನಡೆದುಕೊಳ್ಳುತ್ತೇವೆ. ಬಿಜೆಪಿಯ ಯಡಿಯೂರಪ್ಪ ಅವರು ಸಮ್ಮಿಶ್ರ ಸರ್ಕಾರ ವಿಸರ್ಜನೆ ಮಾಡಲಿ ಎಂದು ಹೇಳುತ್ತಿದ್ದಾರೆ.ಅವರ ಕೈಯಲ್ಲಿ ಎಲ್ಲವೂ ಇದೆ ಅವರು ಏನು ಬೇಕೋ ಮಾಡಿಕೊಳ್ಳಲಿ ಎಂದು ಹೇಳಿದರು.

ಲಿಂಗಾಯತರನ್ನು ಕಡೆಗಣಿಸಲಾಗುತ್ತಿದೆ ಎಂದು ಶಾಸಕ ಬಿ.ಸಿ.ಪಾಟೀಲ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಸಮರ್ಥನೆ: ಜಿಂದಾಲ್‍ಗೆ ಭೂಮಿ ನೀಡಿರುವುದನ್ನು ಡಿ.ಕೆ.ಶಿವಕುಮಾರ್ ಸಮರ್ಥಿಸಿಕೊಂಡರು. ಈ ಹಿಂದಿನ ಸರ್ಕಾರದ ಸಂಪುಟ ಸಭೆಯ ನಿರ್ಧಾರ. ಬಂಡವಾಳ ಹೂಡಿಕೆಯ ಸಮಾವೇಶ ಮಾಡಲಾಗಿತ್ತು. ಆಗ ಜಿಂದಾಲ್ ಕಂಪನಿ ಬಂಡವಾಳ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿದೆ.ಪ್ರತಿಯಾಗಿ ಭೂಮಿ ನೀಡಿದ್ದೇವೆ. ಜಿಂದಾಲ್ ಬಂಡವಾಳ ಹೂಡಿಕೆ ಮಾಡುತ್ತಿರುವುದು ರಾಜ್ಯಕ್ಕೆ ಗೌರವದ ವಿಷಯ. ಉದ್ಯೋಗ, ವಿದ್ಯುತ್ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಜಿಂದಾಲ್ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದೆ. ಉದ್ಯಮಕ್ಕಾಗಿ ಭೂಮಿ ನೀಡುವುದು ತಪ್ಪಲ್ಲ. ಈ ಹಿಂದೆ ಇನ್ಫೋಸಿಸ್‍ಗೆ ಜಮೀನು ನೀಡಿದಾಗ ನನ್ನ ಬಗ್ಗೆಯೂ ಟೀಕೆಗಳು ಕೇಳಿಬಂದಿದ್ದವು.

ಬಂಡವಾಳ ಹೂಡಿಕೆ ಮಾಡುವವರಿಗೆ ನಾವು ಅನುಕೂಲ ಮಾಡಿಕೊಡಬೇಕು. ಕೆಲವೊಂದನ್ನು ಪಡೆಯಬೇಕಾದರೆ ಕೆಲವೊಂದನ್ನು ಕಳೆದುಕೊಳ್ಳಬೇಕು ಎಂದು ಅವರು ಮಾರ್ಮಿಕವಾಗಿ ನುಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ