ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಪೊಲೀಸ್ ಅಧಿಕಾರಿ ಅಣ್ಣಾಮಲೈ

ಬೆಂಗಳೂರು, ಮೇ 28- ವಿವಿಧ ಜಿಲ್ಲೆಗಳಲ್ಲಿ ದಕ್ಷತೆ ಮತ್ತು ನಿಷ್ಠೆಯಿಂದ ಕಾರ್ಯ ನಿರ್ವಹಿಸಿ ಜನಪ್ರಿಯ ಪೊಲೀಸ್ ಅಧಿಕಾರಿಯಾಗಿದ್ದ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಇಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ತಿಳಿಸಿರುವ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಈವರೆಗೂ ತಾವು ನಿರ್ವಹಿಸಿದ ಪೊಲೀಸ್ ಹುದ್ದೆ ನಮಗೆ ಅತ್ಯಂತ ಸಂತಸ ನೀಡಿದೆ ಎಂದು ತಿಳಿಸಿದ್ದಾರೆ.

ಪೊಲೀಸರ ಕರ್ತವ್ಯ ದೇವರಿಗೆ ತುಂಬಾ ಹತ್ತಿರವಾದ ಕಾಯಕ ಎಂಬುದರಲ್ಲಿ ನನಗೆ ಬಲವಾದ ನಂಬಿಕೆ ಇದೆ. ನನಗೆ ಸಹಕಾರ ನೀಡಿದ ಪೊಲೀಸ್ ಇಲಾಖೆಗೆ, ಸಿಬ್ಬಂದಿಗಳಿಗೆ, ಉನ್ನತಾಧಿಕಾರಿಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ನಾನು ಆರು ತಿಂಗಳ ಹಿಂದೆಯೇ ರಾಜೀನಾಮೆ ನೀಡುವ ಬಗ್ಗೆ ನಿರ್ಧಾರ ಕೈಗೊಂಡಿದ್ದೆ. ನನ್ನ ಈ ನಿರ್ಧಾರದಿಂದ ಆಪ್ತರಿಗೆ ಮತ್ತು ಜನತೆಗೆ ಬೇಸರವಾಗಿದ್ದರೆ ಅದಕ್ಕೆ ನಾನು ಕ್ಷಮೆ ಕೋರುತ್ತೇನೆ ಎಂದು ಅಣ್ಣಾಮಲೈ ಹೇಳಿದ್ದಾರೆ.

ತಾವು ರಾಜಕೀಯ ಸೇರುವುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಈ ಬಗ್ಗೆ ನಾನು ಯಾವುದೇ ಸ್ಪಷ್ಟ ತೀರ್ಮಾನ ಕೈಗೊಂಡಿಲ್ಲ. ನಾನು ದೊಡ್ಡ ಮಹತ್ವಾಕಾಂಕ್ಷೆಗಳನ್ನು ಹೊಂದಿರುವ ವ್ಯಕ್ತಿಯಲ್ಲ. ನನ್ನ ಜೀವನದಲ್ಲಿ ಲಭಿಸುವ ಸಣ್ಣಪುಟ್ಟ ಸಂತೋಷದಲ್ಲೇ ತೃಪ್ತಿಪಟ್ಟ ವ್ಯಕ್ತಿ ನಾನು. ನಾನು ನನ್ನ ತವರೂರಿನಲ್ಲಿ ಕೆಲಕಾಲ ಇರುತ್ತೇನೆ. ಜೀವನ ಅವಕಾಶಗಳ ತಾಣ.ಮುಂದೇನು ಎಂಬ ಬಗ್ಗೆ ನಾನು ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

ಕಾರ್ಕಳ, ಉಡುಪಿ, ಚಿಕ್ಕಮಗಳೂರು ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಾನು ಕಾರ್ಯನಿರ್ವಹಿಸಿದಾಗ ಅತ್ಯುತ್ತಮ ವ್ಯಕ್ತಿಗಳು ನನಗೆ ಉತ್ತಮ ರೀತಿಯಲ್ಲಿ ಸಹಕಾರ ನೀಡಿದರು. ನನ್ನ ಹಿರಿಯ ಅಧಿಕಾರಿಗಳು ಉತ್ತಮ ಕಾರ್ಯಗಳಿಗೆ ಬೆನ್ನುತಟ್ಟಿ ಪ್ರೋತ್ಸಹಿಸಿದರು ಅವರೆಲ್ಲರ ಮಾರ್ಗದರ್ಶನ ಮತ್ತು ಸಲಹೆಗಳಿಂದ ವಂಚಿತನಾಗುತ್ತಿದ್ದೇನೆ ಎಂಬ ಬೇಸರವೂ ನನ್ನಲ್ಲಿದೆ. ನನ್ನ ಜತೆ ಕೆಲಸ ಮಾಡಿದ ಸಿಬ್ಬಂದಿ ತುಂಬಾ ಬುದ್ಧಿವಂತರು ಮತ್ತು ಚಾಣಾಕ್ಷರು.

ಪೊಲೀಸ್ ಇಲಾಖೆಯಲ್ಲಿ ಅತ್ಯಂತ ದಕ್ಷ ಮತ್ತು ನಿಷ್ಠಾವಂತ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಇದ್ದಾರೆ. ಅವರೆಲ್ಲರೊಂದಿಗೆ ಕೆಲಸ ಮಾಡಿದ ಸಂತೋಷವೂ ನನಗಿದೆ ಎಂದು ಅಣ್ಣಾಮಲೈ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ