ಬೆಂಗಳೂರು, ಮೇ 28-ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂಬ ಕಾರಣಕ್ಕಾಗಿ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಜನತೆಗೆ ವಿರುದ್ಧವಾಗಿ ಆಡಳಿತ ನಡೆಸುತ್ತಿದೆ. ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ. ಅಲ್ಲಿಯ ತನಕ ನಾವು ಕಾಯೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಹೆಚ್ಚು ದಿನಗಳ ಕಾಲ ಮುಂದುವರೆಯುವುದಿಲ್ಲ. ಕೇವಲ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಕಾರಣಕ್ಕಾಗಿ ಹೊಂದಾಣಿಕೆ ಮಾಡಿಕೊಂಡಿದೆ. ಇದು ಎಷ್ಟು ದಿನಗಳ ಕಾಲ ಇರುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಬರುವ ದಿನಗಳು ನಮಗೆ ಒಳ್ಳೆಯದಾಗಬಹುದೆಂಬ ಆಶಾ ಭಾವನೆಯನ್ನು ಅವರು ವ್ಯಕ್ತಪಡಿಸಿದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಎರಡನೇ ಬಾರಿ ಸಂಸದರಾಗಿ ಆಯ್ಕೆಯಾಗಿರುವ ಶೋಭಾಕರಂದ್ಲಾಜೆಗೆ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುವ ವೇಳೆ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಒಂದು ಮಾತು ಹೇಳಿದ್ದೆ. ಅಪ್ಪ-ಮಕ್ಕಳು ಸೇರಿಕೊಂಡು ಕಾಂಗ್ರೆಸ್ ಪಕ್ಷವನ್ನು ಕೆಲವೇ ದಿನಗಳಲ್ಲಿ ಉರುಳಿಸಲಿದ್ದಾರೆ ಎಂದು ಹೇಳಿದ ಮಾತುಗಳು ಈಗ ನಿಜವಾಗಿದೆ.ಇದಕ್ಕೆ ಕಾಂಗ್ರೆಸ್ ನಾಯಕರು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಫಲಿತಾಂಶಕ್ಕೂ ಮುನ್ನವೇ ತುಮಕೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕಲಬುರಗಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಕೋಲಾರದಲ್ಲಿ ಕೆ.ಎಚ್.ಮುನಿಯಪ್ಪ, ಚಿಕ್ಕಬಳ್ಳಾಪುರದಲ್ಲಿ ಎಂ.ವೀರಪ್ಪ ಮೊಯ್ಲಿ ಸೋಲುತ್ತಾರೆ ಹಾಗೂ ಮಂಡ್ಯದಲ್ಲಿ ಸುಮಲತಾ ಗೆದ್ದೇ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದ್ದೆ. ಆಗ ನನ್ನ ಮಾತನ್ನು ಯಾರೂ ನಂಬಲಿಲ್ಲ. ಈಗ ಎಲ್ಲರೂ ನನ್ನ ಮಾತಿಗೆ ತಲೆ ಬಾಗಿದ್ದಾರೆ ಎಂದು ಹೇಳಿದರು.
22 ಲೋಕಸಭಾ ಕ್ಷೇತ್ರವನ್ನು ಗೆಲ್ಲುತ್ತೇವೆ ಎಂದು ಹೇಳಿದಾಗಲೂ ಕೆಲವರು ಸಾಧ್ಯವೇ ಇಲ್ಲ ಎಂದು ಮೂಗು ಮುರಿದರು. ಸತತ ಪರಿಶ್ರಮದಿಂದಾಗಿ ರಾಜ್ಯದ ಇತಿಹಾಸದಲ್ಲಿ ಇಂದು 25 ಲೋಕಸಭಾ ಕ್ಷೇತ್ರಗಳನ್ನು ಗೆದ್ದು ದಾಖಲೆ ನಿರ್ಮಿಸಿದ್ದೇವೆ. ಇದಕ್ಕಾಗಿ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ದಾಪುಗಾಲಿಡುತ್ತಿದ್ದಾರೆ. ಹಿಂದಿನ ಎನ್‍ಡಿಎ ಸರ್ಕಾರದ ಅವಧಿಯಲ್ಲಿ ರಕ್ಷಣಾ ಸಚಿವರಾಗಿದ್ದ ನಿರ್ಮಾಲಾ ಸೀತಾರಾಮನ್ ಇಡೀ ದೇಶವೇ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದರು. 78 ಮಹಿಳಾ ಸಂಸದರಲ್ಲಿ ಬಿಜೆಪಿಯಿಂದಲೇ 41 ಮಹಿಳೆಯರು ಆಯ್ಕೆಯಾಗಿದ್ದಾರೆ.
ನಮ್ಮ ಪಕ್ಷ ಮಹಿಳೆಯರಿಗೆ ನೀಡುತ್ತಿರುವ ಗೌರವದ ಸೂಚಕ ಇದಾಗಿದೆ ಎಂದು ಬಿಎಸ್‍ವೈ ತಿಳಿಸಿದರು.
ಜೂ.5 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯದಿಂದ ನೂತನವಾಗಿ ಆಯ್ಕೆಯಾಗಿರುವ 25 ಸಂಸದರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಬಾರಿ ಕೇಂದ್ರದಲ್ಲಿ ರಾಜ್ಯಕ್ಕೆ ಹೆಚ್ಚಿನ ಸ್ಥಾನಮಾನಗಳು ಸಿಗುವ ಸಂಭವವಿದೆ. ಅಂತಿಮವಾಗಿ ವರಿಷ್ಠರ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಬೇಕು ಎಂದು ಸಲಹೆ ಮಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಮಹಿಳೆಯರು ಮನಸ್ಸು ಮಾಡಿದರೆ ಯಾವ ಕ್ಷೇತ್ರದಲ್ಲಿ ಏನು ಬೇಕಾದರೂ ಸಾಧಿಸಬಲ್ಲರು.
ಇಂದು ವಿಗ್-17 ಯುದ್ಧ ವಿಮಾನದ ಹಾರಾಟ ನಡೆಸಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಸುಷ್ಮಾ ಸ್ವರಾಜ್ ಹಾಗೂ ನಿರ್ಮಲಾ ಸೀತಾರಾಮನ್ ಸಚಿವರಾಗಿ ಅನೇಕ ಜನ ಮೆಚ್ಚುವ ಆಡಳಿತ ನೀಡಿದ್ದಾರೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷ ಏನೇ ಕೆಲಸ ಕೊಟ್ಟರೂ ಅದನ್ನು ನಿಭಾಯಿಸುತ್ತೇನೆ ಎಂದು ಹೇಳಿದರು.
ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿಶೆಟ್ಟಿ ಮಾತನಾಡಿ, ನಿಂಬೆಹಣ್ಣಿನಿಂದ ಒಂದು ಸ್ಥಾನ ಗೆದ್ದವರು, ಕುತಂತ್ರದಿಂದ ಮತ್ತೊಂದು ಸ್ಥಾನ ಗೆದ್ದವರು, ಸ್ವಾಭಿಮಾನದಿಂದ ಇನ್ನೊಂದು ಸ್ಥಾನ ಗೆದ್ದವರು, ಆತ್ಮಾಭಿಮಾನದಿಂದ 25 ಸ್ಥಾನ ಗೆದ್ದವರು ನಾವು. ಜೂನ್ ತಿಂಗಳೊಳಗೆ ಬಿಜೆಪಿ ಸರ್ಕಾರ ರಚನೆಯಾಗದಿದ್ದರೆ ಯಡಿಯೂರಪ್ಪ ರಾಜಕೀಯ ನಿವೃತ್ತಿ ಪಡೆಯುತ್ತಾರಾ ಎಂದು ಮಾಜಿ ಮುಖ್ಯಮಂತ್ರಿಯೊಬ್ಬರು ಪ್ರಶ್ನೆ ಮಾಡುತ್ತಾರೆ. ಮೊದಲು ಯಾರು ನಿವೃತ್ತಿ ಪಡೆಯಬೇಕೆಂಬುದನ್ನು ಆತ್ಮಾವಲೋಕನಮಾಡಿಕೊಳ್ಳಲಿ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯೆ ತಾರಾ, ಚಿತ್ರನಟಿ ಶ್ರುತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.