ಬೆಂಗಳೂರು: ಖಡಕ್ ಐಪಿಎಸ್ ಅಧಿಕಾರಿ, ಕರ್ನಾಟಕದ ಸಿಂಗಮ್ ಖ್ಯಾತಿಯ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರು ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಡಿಜಿ ಹಾಗೂ ಐಜಿಪಿಗೆ ನೀಲಮಣಿ ರಾಜು ಅವರಿಗೆ ಪತ್ರ ಮುಖೇನ ರಾಜೀನಾಮೆ ಪತ್ರವನ್ನು ಅಣ್ಣಾಮಲೈ ರವಾನಿಸಿದ್ದಾರೆ. ರಾಜೀನಾಮೆ ಪತ್ರವನ್ನು ಖುದ್ದಾಗಿ ಹೋಗಿ ಕೊಡಬೇಕು ಎಂದೇನಿಲ್ಲ. ಐಪಿಎಸ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದೇನೆ. ವಿವರಣೆ ಕೇಳಲು ಕರೆದಾಗ ನಾನೇ ಖುದ್ದು ಹೋಗಿ ರಾಜೀನಾಮೆ ಸ್ವೀಕರಿಸಿ ಎಂದು ಹೇಳುತ್ತೇನೆ. ಮಾಧ್ಯಮದವರಿಗೆ ನಾನು ಜವಾಬ್ದಾರಿಯುತನಾಗಿದ್ದೇನೆ. ರಾಜೀನಾಮೆಗೆ ಖಂಡಿತ ಕಾರಣ ಏನು ಎಂಬುದರ ಬಗ್ಗೆ ನಿಮ್ಮ ಜತೆ ಹಂಚಿಕೊಳ್ಳುತ್ತೇನೆ. ಮೂರ್ನಾಲ್ಕು ದಿನದಲ್ಲಿ ಪ್ರಕ್ರಿಯೆ ಮುಗಿಯಬಹುದು. ಅದಾದ ಬಳಿಕ ಮಾಧ್ಯಮಗಳ ಜತೆ ಮಾತನಾಡುತ್ತೇನೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ.
ನನ್ನ ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ. ನಾನು ಯಾವುದೇ ರಾಜಕೀಯಕ್ಕೆ ಸದ್ಯದ ಮಟ್ಟಿಗೆ ಹೋಗಲ್ಲ. ನನ್ನ ರಾಜೀನಾಮೆ ಬಗ್ಗೆ ನನ್ನ ಪಾಲಕರಿಗೆ ಮಾಹಿತಿ ಇದೆ. ಅವರು ನನ್ನ ನಿರ್ಧಾರವನ್ನು ಬೆಂಬಲಿಸ್ತಾರೆ ಎಂದು ತಿಳಿಸಿದ್ದಾರೆ.
ನನ್ನ ರಾಜೀನಾಮೆ ವಿಷಯ ಕೇಳಿ ಹಲವರು ನನಗೆ ಕರೆ ಮಾಡಿದ್ದಾರೆ. ರಾಜಕೀಯ ಪಕ್ಷಗಳ ನಾಯಕರು ಕೂಡ ಕರೆ ಮಾಡಿ ರಾಜೀನಾಮೆ ನಿರ್ಧಾರ ಬದಲಿಸಲು ತಿಳಿಸಿದ್ದಾರೆ. ಏನಾದ್ರು ಸಮಸ್ಯೆ ಇದ್ದರೆ ಹೇಳಿ, ಪೋಸ್ಟಿಂಗ್ ಎಲ್ಲಿಗೆ ಬೇಕಾದ್ರು ಕೇಳಿ, ನೀವು ಕರ್ತವ್ಯದಲ್ಲಿ ಮುಂದುವರಿಯಿರಿ ಎಂದು ಸಲಹೆ ನೀಡಿದರು. ನಿಜಕ್ಕೂ ನನಗೆ ಎಲ್ಲರ ಮಾತು ಕೇಳಿ ಸಂತಸ ತಂದಿದೆ. ಆದರೂ ನಾನು ರಾಜೀನಾಮೆ ನೀಡುವುದು ಖಚಿತ ಎಂದು ಅಣ್ಣಮಲೈ ಹೇಳಿದ್ದಾರೆ.
DCP Annamalai Resign