ರಾಜೀನಾಮೆ ಆತ್ಮಹತ್ಯೆಗೆ ಸಮ; ರಾಹುಲ್ ಗೆ ಲಾಲು ಟ್ವೀಟ್

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಹಿನ್ನಲೆಯಲ್ಲಿ ರಾಜೀನಾಮೆಗೆ ನಿರ್ಧರಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಸಮಾಧಾನ ಪಡಿಸಿರುವ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದು ಆತ್ಮಹತ್ಯೆಗೆ ಸಮ ಎಂದು ಟ್ವೀಟ್ ಮೂಲಕ ಎಚ್ಚರಿಸಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳದಂತೆ ತಡೆಯುವುದು ಎಲ್ಲ ಪ್ರತಿಪಕ್ಷಗಳ ಏಕೈಕ ಗುರಿಯಾಗಿತ್ತು. ಆದರೆ, ಬಿಜೆಪಿ ಪಕ್ಷದ ವೈಫಲ್ಯಗಳು ಮತ್ತು ಏಕಾಗಿ ಅದನ್ನು ಅಧಿಕಾರದಿಂದ ಹೊರಗಿಡಬೇಕು ಎಂಬುದನ್ನು ಮತದಾರರಿಗೆ ಮನವರಿಕೆ ಮಾಡಿಕೊಟ್ಟು ರಾಷ್ಟ್ರೀಯ ಅಭಿಪ್ರಾಯ ಮೂಡಿಸಲು ವಿಫಲವಾದವು ಎಂದು ಹೇಳಿದ್ದಾರೆ.

ನಿರ್ದಿಷ್ಟವಾದ ಚುನಾವಣೆಯಲ್ಲಿನ ಫಲಿತಾಂಶದಿಂದ ವೈವಿಧ್ಯಮಯ ಭಾರತದ ಸತ್ಯಗಳನ್ನು ಬದಲಿಸಲು ಸಾಧ್ಯವಿಲ್ಲ. ಒಂದು ವೇಳೆ ಗಾಂಧಿಯೇತರ ಕುಟುಂಬದ ವ್ಯಕ್ತಿಯನ್ನು ಎಐಸಿಸಿ ಅಧ್ಯಕ್ಷನನ್ನಾಗಿ ಮಾಡಿದರೆ ಮುಂದಿನ ಚುನಾವಣೆವರೆಗೂ ಕಾಂಗ್ರೆಸ್​ ಅನ್ನು ಟೀಕಿಸಲು ಬಿಜೆಪಿಗೆ ಹೊಸ ಅಸ್ತ್ರವನ್ನು ನಾವಾಗಿಯೇ ಕೊಟ್ಟಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಅವಕಾಶ ಬಳಸಿಕೊಂಡು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕೈಗೊಂಬೆಯನ್ನು ಕೂರಿಸಿ ಆಟವಾಡುತ್ತಿರುವುದಾಗಿ ನಿಮ್ಮ ಮೇಲೆ ಗೂಬೆ ಕೂರಿಸುವ ಸಾಧ್ಯತೆ ಇದೆ. ಹೀಗೆ ಮುಂದಿನ ಚುನಾವಣೆವರೆಗೂ ನಿಮ್ಮನ್ನು ಟೀಕಿಸಿದರೆ, ನಿಮ್ಮ ಪರವಾಗಿ ಮತದಾರರ ಒಲವು ಕಡಿಮೆಯಾಗಿ, ಅವರ ಕೈ ಮೇಲಾಗುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ವಿವಾದತೀತ ನಾಯಕನ ರೂಪದಲ್ಲಿ ನರೇಂದ್ರ ಮೋದಿ ಅವರನ್ನು ಹೊಂದಿತ್ತು. ಆದರೆ, ಪ್ರತಿಪಕ್ಷಗಳ ಬಳಿ ಸರ್ವಸಮ್ಮತ ನಾಯಕನಿರಲಿಲ್ಲ. ಬಿಹಾರದಂಥ ರಾಜ್ಯದಲ್ಲಿ ಸಮರ್ಥ ಬೌಲರ್​ ಇಲ್ಲದ ಅವಕಾಶವನ್ನು ಭರ್ಜರಿಯಾಗಿ ಬಳಸಿಕೊಂಡ ಮೋದಿ, ಸಿಕ್ಸರ್​ ಮೇಲೆ ಸಿಕ್ಸರ್​ ಸಿಡಿಸಿ ಸುಲಭ ಜಯ ದಾಖಲಿಸಿದರು. ಇದು ಬಿಜೆಪಿ ಗೆಲುವಿಗೆ ಹಾಗೂ ಕಾಂಗ್ರೆಸ್​ ಸೇರಿ ಇತರ ಪ್ರತಿಪಕ್ಷಗಳ ಹಿನ್ನಡೆಗೆ ಕಾರಣ ಎಂದು ವಿಶ್ಲೇಷಿಸಿದ್ದಾರೆ.

Rahul Gandhi’s resignation will be suicidal for Congress, anti-Sangh forces: Lalu Prasad

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ