ಬೆಂಗಳೂರು: ಬಿಜೆಪಿ ಸೇರ್ಪಡೆ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದವರು ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗಲಾಗದು, ಒಂದು ಪಕ್ಷಕ್ಕೆ ಬೆಂಬಲ ನೀಡಬಹುದಷ್ಟೇ ಎಂದು ನೂತನ ಸಂಸದೆ ಸುಮಲತಾ ಅಂಬರೀಶ್ ತಿಳಿಸಿದ್ದಾರೆ
ಡಾಲರ್ಸ್ ಕಾಲನಿಯಲ್ಲಿರುವ ಬಿ.ಎಸ್. ಯಡಿಯೂರಪ್ಪ ಅವರ ನಿವಾಸಕ್ಕೆ ಭಾನುವಾರ ಭೇಟಿ ಕೊಟ್ಟು, ಬಿ.ಎಸ್. ಯಡಿಯೂರಪ್ಪ ಜತೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸೇರ್ಪಡೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆ ಉತ್ತರಿಸುತ್ತಾ, ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದವರು ಒಂದು ಪಕ್ಷಕ್ಕೆ ಬೆಂಬಲ ನೀಡಬಹುದಷ್ಟೇ ಬೇರೆ ಪಕ್ಷ ಸೇರಲಾಗದು. ಇನ್ನು ಈ ಬಗ್ಗೆ ಮಂಡ್ಯ ಕ್ಷೇತ್ರದ ಜನತೆಯ ಅಭಿಪ್ರಾಯ ಕೇಳಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.
ಈ ಬಾರಿಯ ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ತುಂಬಾ ಸಹಕರಿಸಿದ್ದರು. ಆದ್ದರಿಂದ, ಅವರನ್ನು ಭೇಟಿಯಾಗಿ ಕೃತಜ್ಱತೆ ಸಲ್ಲಿಸುವುದು ನನ್ನ ಕರ್ತವ್ಯವಾಗಿತ್ತು. ಅದರಂತೆ ಇಂದು ಅವರನ್ನು ಭೇಟಿಯಾಗಿ ಕೃತಜ್ಱತೆ ಸಲ್ಲಿಸಿದೆ. ಇನ್ನು ಚುನಾವನೆಯಲ್ಲಿ ಮಾಜಿ ಸಿಎಂ ಎಸ್. ಎಂ. ಕೃಷ್ಣ ಸಹಕಾರ ಮುಖ್ಯವಾಗಿತ್ತು. ಅವರು ಹಿರಿಯರು ಹಾಗಾಗಿ ಅವರ ಆಶಿರ್ವಾದವನ್ನೂ ಪಡೆದಿದ್ದಾಗಿ ತಿಳಿಸಿದರು.
ಮೇ 29ಕ್ಕೆ ಮಂಡ್ಯಕ್ಕೆ ಹೋಗುತ್ತೇನೆ. ಅಲ್ಲಿ ಪ್ರತಿ ತಾಲೂಕಿನ ಜನರಿಗೆ ಧನ್ಯವಾದ ತಿಳಿಸುತ್ತೇನೆ. ಅವರ ಅಭಿಪ್ರಾಯದಂತೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ಇನ್ನು ನನ್ನ ಕರ್ತವ್ಯ ನನಗೆ ಗೊತ್ತಿದೆ. ಯಾರಿಂದಲೂ ಹೇಳಿಸಿಕೊಳ್ಳಲ್ಲ. ಅಧಿಕಾರ ಕೊಟ್ಟರೆ ನಿಭಾಯಿಸುತ್ತೇನೆ ಎಂದರು.
Sumalata,BJP,B S Yedyurappa