ಬೆಂಗಳೂರು, ಮೇ 25- ಸೋಲಾರನಂತಹ ಪುನರ್ ನವೀಕರಸಬಹುದಾದ ಇಂಧನ ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಗಿನ್ನಿಸ್ ದಾಖಲೆ ಮಾಡಿರುವ ಸುಶೀಲ್ ರೆಡ್ಡಿ ಮತ್ತು ನಾಲ್ವರ ತಂಡ ದಿ ಸನ್ಪೆಡಲ್ ರೈಡ್ ಪ್ರವಾಸ ಹಮ್ಮಿಕೊಂಡಿದ್ದಾರೆ.
ಇಂದು ನಗರದಲ್ಲಿ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜ್ ಮತ್ತು ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ಕುಮಾರ್ ಹಸಿರು ನಿಶಾನೆ ತೋರಿದರು.
ಸುಸ್ಥಿರ ಇಂಧನ, ಚಲನಶೀಲತೆ ಮತ್ತು ಶುದ್ಧ ಗಾಳಿಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಐಐಟಿ ಬಾಂಬೆಯ ಹಳೆಯ ವಿದ್ಯಾರ್ಥಿಯಾಗಿರುವ ಸುಶೀಲ್ ರೆಡ್ಡಿ ದೇಶಾದ್ಯಂತ 6ಸಾವಿರ ಕಿ.ಮೀ. ದೂರದ 60ದಿನಗಳ ಪ್ರವಾಸವನ್ನು ಸೋಲಾರ್(ಭಾಗಶಃ) ಆಧಾರಿತ ಎಲೆಕ್ಟ್ರಿಕ್ (ಟುಕ್ಟುಕ್) ರಿಕ್ಷಾ ಮೂಲಕ ಕೈಗೊಂಡಿದ್ದಾರೆ.
ಸುಶೀಲ್ ರೆಡ್ಡಿ, ಪಲ್ಲವಿ ಸಿದ್ದಾಂತ, ಋತ್ವಿಕ್ ಆರ್ಯ ಮತ್ತು ಸುಧೀರ್ ಲೆಕ್ಕಾಲಾ ಅವರನ್ನೊಳಗೊಂಡ ತಂಡ ಬೆಂಗಳೂರಿನಿಂದ ಪ್ರವಾಸ ಕೈಗೊಂಡಿದ್ದಾರೆ.
ವೋಲ್ಟಾ ಆಟೋ ಮೋಟೊ ಇಂಡಿಯಾ ಕಂಪನಿ ತಯಾರಿಸಿರುವ ಲಿಥಿಯಂ ಬ್ಯಾಟರಿಗಳ ನೆರವಿನಿಂದ ಚಲಾಯಿಸಬಲ್ಲ ಹಾಗು ಮಾರ್ಪಾಟು ಮಾಡಿರುವ ಎಲೆಕ್ಟ್ರಿಕ್ ಆಟೋ ರಿಕ್ಷಾದಲ್ಲಿ ಈ ತಂಡ ದೇಶದೆಲ್ಲೆಡೆ ಸಂಚರಿಸಿ ಸಾರ್ವಜನಿಕರಲ್ಲಿ ಸುಸ್ಥಿರ ಇಂಧನ ಬಳಕೆ ಬಗ್ಗೆ ಮನವರಿಕೆ ಮಾಡಿಕೊಡಲಿದೆ.
ಸುಸ್ಥಿರ ಸಾರಿಗೆಯನ್ನು ಉತ್ತೇಜಿಸಲು ಹೊರಟಿರುವ ಈ ತಂಡ ಪ್ರವಾಸದುದಕ್ಕೂ ಸಾರ್ವಜನಿಕರೊಂದಿಗೆ ಸಂವಾದಗಳನ್ನು ನಡೆಸಿ ಸುಸ್ಥಿರ ಇಂಧನವಾದ ಸೋಲಾರ್ ಬಗ್ಗೆ ಮನವರಿಕೆ ಮಾಡಲಿದೆ.
ತಂಡದ ಸುರಕ್ಷತೆಗಾಗಿ ಎವಿಐಎಸ್ ನೇರವಿನ ವಾಹನವು ಇವರ ಆಟೊ ರಿಕ್ಷಾವನ್ನು ಹಿಂಬಾಲಿಸಲಿದೆ. ಪುಣೆ, ಸೂರತ್, ಬರೋಡಾ, ಅಹ್ಮದಾಬಾದ್, ಜೈಪುರ, ಗುರುಗಾಂವ್, ಲಕ್ನೋ, ವಾರಣಾಸಿ, ಆಗ್ರಾ, ವೈಝಾಗ್, ನೆಲ್ಲೂರು, ವೆಲ್ಲೂರು ಮತ್ತಿತರರ ಮಹಾನಗರಗಳಿಗೆ ತಂಡ ಭೇಟಿ ನೀಡಲಿದೆ.
ದಿಸನ್ ಪೆಡಲ್ರೈಡ್ ಮತ್ತು ಎವಿಐಎಸ್ ಸಹಭಾಗಿತ್ವದ ಬಗ್ಗೆ ಈ ಸಂದರ್ಭದಲ್ಲಿ ಏವಿಸ್ ಇಂಡಿಯಾದ ಸಿಇಒ ಸುನಿಲ್ ಗುಪ್ತಾ ಮಾತನಾಡಿದರು.