ಕಾವೇರಿಪುರ ವಾರ್ಡ್ ಮತ್ತು ಸಗಾಯಪುರಂ ವಾರ್ಡ್‍ಗೆ ಮೇ 29ರಂದು ಉಪಚುನಾವಣೆ

ಬೆಂಗಳೂರು, ಮೇ 25- ರಾಜ್ಯ ಚುನಾವಣಾ ಆಯೋಗವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಾವೇರಿಪುರ ವಾರ್ಡ್ ಮತ್ತು ಸಗಾಯಪುರಂ ವಾರ್ಡ್‍ಗೆ ಸಂಬಂಧಿಸಿದಂತೆ ಮೇ 29ರಂದು ಉಪಚುನಾವಣೆ ಪ್ರಕಟಿಸಿದ್ದು, ಈ ಸಂಬಂಧ ಮೇ 28ರ ಬೆಳಗ್ಗೆ 7 ಗಂಟೆಯಿಂದ 29ರ ಮಧ್ಯರಾತ್ರಿ 12 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದೆ.

ಈ ಸಮಯದಲ್ಲಿ ಯಾವುದೇ ವ್ಯಕ್ತಿಗಳು ಯಾವುದೇ ತರಹದ ಶಸ್ತ್ರಾಸ್ತ್ರಗಳನ್ನು ಹಿಡಿದು ಓಡಾಡುವಂತಿಲ್ಲ. ಸ್ಫೋಟಕ ಸಿಡಿಸುವುದಾಗಲಿ, ಕಲ್ಲುಗಳನ್ನು ಎಸೆಯುವುದು, ಮೆರವಣಿಗೆ ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಕಾರ್ಪೊರೇಟರ್ ವಾರ್ಡ್‍ಗೆ ಒಳಪಡುವ ಪಶ್ಚಿಮ ವಿಭಾಗದ ಕಾಮಾಕ್ಷಿಪಾಳ್ಯ ಮತ್ತು ವಿಜಯನಗರ ವ್ಯಾಪ್ತಿಯಲ್ಲಿ ಹಾಗೂ ಸಗಾಯಪುರಂ ವಾರ್ಡ್‍ಗೆ ಒಳಪಡುವ ಪೂರ್ವ ವಿಭಾಗದ ಕೆಜಿ ಹಳ್ಳಿ ಮತ್ತು ಪುಲಕೇಶಿನಗರ ವ್ಯಾಪ್ತಿಗಳಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.

ಶಾಂತಿಯುತವಾಗಿ ಚುನಾವಣಾ ಪ್ರಕ್ರಿಯೆ ನಡೆಸುವ ಉದ್ದೇಶದಿಂದ ಈ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

28ರಂದು ಬೆಳಗ್ಗೆ 7 ಗಂಟೆಯಿಂದ 29ರ ಮಧ್ಯರಾತ್ರಿವರೆಗೂ ಈ ವ್ಯಾಪ್ತಿಗಳಲ್ಲಿ ಎಲ್ಲ ಬಾರ್‍ಗಳು, ವೈನ್‍ಶಾಪ್‍ಗಳು, ಪಬ್‍ಗಳು ಮತ್ತು ಮದ್ಯ ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ