ನವದೆಹಲಿ: 17ನೇ ಲೋಕಸಭೆಗೆ ಏಳು ಹಂತಗಳಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭವಾಗಿದ್ದು, ಬಿಜೆಪಿ ನೇತೃತ್ವದ ಎನ್ ಡಿಎ 272, ಯುಪಿಎ 117, ಇತರರು 112 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಇದರ ಜೊತೆಗೆ ಒಡಿಶಾ, ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವಿಧಾನಸಭೆ ಕ್ಷೇತ್ರಗಳ ಫಲಿತಾಂಶ ಕೂಡ ಹೊರಬೀಳಲಿದೆ. ಒಟ್ಟು 8 ಸಾವಿರದ 40 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಮುಂದಿನ ಐದು ವರ್ಷಗಳ ದೇಶ ಭವಿಷ್ಯಕ್ಕೆ ಇಂದಿನ ಫಲಿತಾಂಶ ದಿಕ್ಸೂಚಿಯಾಗಲಿದೆ. ಮತಗಟ್ಟೆ ಸಮೀಕ್ಷೆಗಳು ನಿಜವಾದರೆ ಬಿಜೆಪಿ ನೇತೃತ್ವದ ಎನ್ ಡಿಎ ಮತ್ತೊಮ್ಮೆ ಅಧಿಕಾರಕ್ಕೆ ಬರುವ ನಿರೀಕ್ಷೆಯಿದೆ. ವಿವಿಪ್ಯಾಟ್ ಮತಗಳ ಎಣಿಕೆಯಿಂದಾಗಿ ಚುನಾವಣೆ ಫಲಿತಾಂಶ ಇಂದು ಸಂಜೆ ನಾಲ್ಕೈದು ಗಂಟೆ ತಡವಾಗಿ ಪ್ರಕಟವಾಗುವ ನಿರೀಕ್ಷೆಯಿದೆ
ರಾಷ್ಟ್ರದ ಮುಂದಿನ ಸರ್ಕಾರವನ್ನು ನಿರ್ಧರಿಸುವ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶದ ಕುತೂಹಲಕ್ಕೆ ಸಹ ಇಂದು ಅಂತಿಮ ತೆರೆ ಬೀಳಲಿದ್ದು, ಘಟಾನುಘಟಿಗಳ ಭವಿಷ್ಯ ಸಂಜೆಯ ವೇಳೆಗೆ ಹೊರಬೀಳಲಿದೆ.