ನವದೆಹಲಿ, ಮೇ. 22-ಹೈವೋಲ್ಟೆಜ್ ಲೋಕಸಭಾ ಚುನಾವಣೆಯ ನಾಳಿನ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿರುವಾಗಲೇ ಕೇಂದ್ರ ಚುನಾವಣಾ ಆಯೋಗ ಮತ ಎಣಿಕೆ ಕಾರ್ಯಕ್ಕಾಗಿ ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿದೆ.
ಆಯಾ ರಾಜ್ಯಗಳ ಸೇರಿದಂತೆ ಒಟ್ಟು 542 ಕ್ಷೇತ್ರಗಳಿಗೆ ನಡೆದ ಮತದಾನದ ನಂತರ ವಿದ್ಯುನ್ಮಾನ ಮತ ಯಂತ್ರಗಳನ್ನು (ಇವಿಎಂ) ಇರಿಸಲಾದ ಸ್ಟ್ರಾಂಗ್ ರೂಂ ಗಳಿಗೆ (ಭದ್ರತಾ ಕೊಠಡಿಗಳು) ಸಿಆರ್‍ಪಿಎಫ್ ಯೋಧರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಇವಿಎಂಗಳನ್ನು ಹ್ಯಾಕರ್‍ಗಳು ವಿರೂಪಗೊಳಿಸುವ ಸಾಧ್ಯತೆ ಆರೋಪದ ಹಿನ್ನೆಲೆಯಲ್ಲಿ ಸ್ಟ್ರಾಂಗ್‍ರೂಂಗಳ ಸುತ್ತ-ಮುತ್ತ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಗಳೊಂದಿಗೆ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಇವಿಎಂ ಮತ್ತು ವಿವಿ- ಪ್ಯಾಟಗಳಿಗೆ ಸಂಬಂಧಿಸಿದಂತೆ ಈಗಾಗಲೇ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದು, ಈ ಸಂಬಂಧ ದಾಖಲಾಗುವ ದೂರಗಳ ಕುರಿತು ನಿಗಾ ವಹಿಸಲು ಚುನಾವಣಾ ಆಯೋಗ 24ತಾಸುಗಳ ನಿಯಂತ್ರಣ ಕೊಠಡಿಗಳ ವ್ಯವಸ್ಥೆ ಮಾಡಿದೆ.
ನಾಳೆ ಮೊದಲು ಈ ಇವಿಎಂಗಳ ಮತ ಎಣಿಕೆಯನ್ನು ಮಾಡಲಾಗುತ್ತದೆ. ನಂತರ ವಿವಿ ಪ್ಯಾಟ ಮತ ಚೀಟಿಗಳ ತಾಳೆ ನೋಡಿ ನಿಖರತೆಯನ್ನು ಖಾತರಿ ಪಡಿಸಿಕೊಳ್ಳಲಾಗುತ್ತದೆ. ಇವೆರಡು ತಾಳೆಯಾದ ನಂತರ ಆಯಾಯ ಮತ ಎಣಿಕೆ ಕೇಂದ್ರಗಳಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ.
ಈ ಪ್ರಕ್ರಿಯೆ ಪೂರ್ಣಗೊಳಿಸಲು ಸಮಯ ಬೇಕಾಗಿರುವುದರಿಂದ ಚುನಾವಣಾ ಫಲಿತಾಂಶ ಸುಮಾರು 4ಗಂಟೆಗಳ ಕಾಲ ತಡವಾಗುವ ಸಾಧ್ಯತೆಯಿದೆ. ಸಂಜೆ ವೇಳೆಗೆ 542ಕ್ಷೇತ್ರಗಳ ಫಲಿತಾಂಶಗಳ ಸ್ಪಷ್ಟ ಚಿತ್ರಣ ದೊರೆಯಲಿದೆ.