ಜೂನ್. 1 ಮತ್ತು 2ರಂದು ಹಲಸು ಮತ್ತು ಮಾವು ಮೇಳ

ಬೆಂಗಳೂರು, ಮೇ 22- ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆ ವತಿಯಿಂದ ಇದೇ 28 ಮತ್ತು 29ರಂದು ಐಸಿಎಆರ್-ಐಐಎಚ್‍ಆರ್‍ನಲ್ಲಿ ಹಾಗೂ ಜೂನ್ 1 ಮತ್ತು 2ರಂದು ಚಿತ್ರಕಲಾ ಪರಿಷತ್‍ನಲ್ಲಿ ಮಾವು ಮತ್ತು ಹಲಸು ಮೇಳವನ್ನು ಆಯೋಜಿಸ ಲಾಗಿದೆ ಎಂದು ಸಂಸ್ಥೆ ನಿರ್ದೇಶಕ ದಿನೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ದೇಶದಲ್ಲಿ ಮಾವು ಬೆಳೆಗಳನ್ನು 4 ಸಾವಿರ ವರ್ಷಗಳಿಂದ ಬೆಳೆಯಲಾಗುತ್ತಿದೆ.ಸುಮಾರು ಸಾವಿರ ತಳಿಗಳು ಪ್ರಚಲಿತದಲ್ಲಿವೆ. ಇವುಗಳಲ್ಲಿ 25 ತಳಿಗಳು ಮಾತ್ರ ವಾಣಿಜ್ಯ ದೃಷ್ಟಿಯಿಂದ ಪ್ರಮುಖ ಎನ್ನಿಸಿವೆ. ನಮ್ಮ ಸಂಸ್ಥೆಯಲ್ಲಿ 750 ತಳಿಗಳನ್ನು ಸಂರಕ್ಷಣೆ ಮಾಡಲಾಗಿದೆ ಎಂದರು.
ಉಪ್ಪಿನಕಾಯಿಗೆ ಬಳಸುವ ಅಪ್ಟೆಮಿಡಿ ಮಾವಿನ ಸುಮಾರು 180 ತಳಿಗಳನ್ನು ಸಂರಕ್ಷಿಸಿದ್ದು, ಹಲಸಿನಲ್ಲಿ ಸುಮಾರು ಸಾವಿರ ತಳಿಗಳನ್ನು ಗುರುತಿಸಲಾಗಿದ್ದು, ನಮ್ಮ ಸಂಸ್ಥೆಯಲ್ಲಿ 110 ತಳಿಗಳನ್ನು ಸಂರಕ್ಷಣೆ ಮಾಡಿರುವುದಾಗಿ ತಿಳಿಸಿದರು.
ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡುವ ಹಾಗೂ ವಿವಿಧ ತಳಿಗಳನ್ನು ಸಾರ್ವಜನಿಕರಿಗೆ ಪರಿಚಯಿಸುವ ದೃಷ್ಟಿಯಿಂದ ಈ ಮೇಳವನ್ನು ಆಯೋಜಿಸಲಾಗಿದ್ದು, ಮೇಳವು ಬೆಳಗ್ಗೆ 9 .30 ರಿಂದ ಸಂಜೆ 5 ಗಂಟೆ ವರೆಗೆ ನಡೆಯುತ್ತದೆ.
ಅತಿ ಹೆಚ್ಚು ತೋಟಗಾರಿಕೆಯನ್ನಾಗಿ ವಿಸ್ತಾರ ಮಾಡುವ ಉದ್ದೇಶ ಹಾಗೂ ರೈತರಿಗೆ ಮಾವು ಬೆಳೆ ಬೆಳೆಯಲು ಬೇಕಾಗುವಂತಹ ಸಲಹೆಗಳನ್ನು ಸಹ ಈ ಕಾರ್ಯಕ್ರಮದಲ್ಲಿ ನೀಡಲಾಗುವುದು ಎಂದು ವಿವರಿಸಿದರು.
ಮಳಿಗೆಗಳನ್ನು ಉಚಿತವಾಗಿ ತೆರೆಯಬಹುದಾಗಿದ್ದು, 10 ಸಾವಿರಕ್ಕೂ ಹೆಚ್ಚು ಜನರು ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ.ಟಿ.ಎನ್.ಶಿವಾನಂದ್, ಡಾ.ಜಿ.ಕರುಣಾಕರನ್, ವೆಂಕಟ್‍ಕುಮಾರ್ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ