ನವದೆಹಲಿ: ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಸಮೀಕ್ಷೆಗಳ ವಿಶ್ಲೇಷಣೆಕಾರರನ್ನೂ ಅಚ್ಚರಿ ಬೀಳಿಸುವಂತಹ ಫಲಿತಾಂಶ ಬರಲಿದೆ. ರಾಜ್ಯದಲ್ಲಿ ಬಿಜೆಪಿ ಅದ್ಭುತ ಸಾಧನೆ ತೋರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ.
ಟೈಮ್ಸ್ ನೌ-ವಿಎಂಆರ್ ಸಮೀಕ್ಷೆ ಪ್ರಕಾರ ಬಂಗಾಳದ 42 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ 11 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ. 2014ರ ಚುನಾವಣೆಯಲ್ಲಿ ಬಿಜೆಪಿ 2 ಸ್ಥಾನಗಳನ್ನು ಗೆದ್ದಿತ್ತು.
‘ಬಂಗಾಳದಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿಗೆ ಅಪಾರ ಜನಬೆಂಬಲ ದೊರೆಯುತ್ತಿರುವುದನ್ನು ದೇಶವೇ ನೋಡಿದೆ. 2014ರಲ್ಲಿ ಉತ್ತರ ಪ್ರದೇಶದಲ್ಲಿ ಆಗಿದ್ದು 2019ರಲ್ಲಿ ಬಂಗಾಳದಲ್ಲೂ ಆಗಲಿದೆ’ ಎಂದು ರಾಮ್ ಮಾಧವ್ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ನೇತೃತ್ವದಲ್ಲಿ ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟ ಈಗಾಗಲೇ ವಿಫಲ ಪ್ರಯೋಗವಾಗಿದೆ. ಹಲವು ಪಕ್ಷಗಳು ಮಹಾಘಟಬಂಧನ ರಚಿಸಲು ಪ್ರಯತ್ನಿಸಿ ವಿಫಲವಾಗಿವೆ ಅದು ಯಾವ ರಾಜ್ಯದಲ್ಲೂ ಯಶಸ್ವಿಯಾಗಿಲ್ಲ. ಚುನಾವಣೆ ಬಳಿಕವೂ ಮತ್ತೊಮ್ಮೆ ಪ್ರಯತ್ನಗಳು ನಡೆಯುತ್ತಿವೆ. ಆದರೆ ಚುನಾವಣೆಗೆ ಮೊದಲೇ ಒಗ್ಗೂಡದ ಪಕ್ಷಗಳು ಚುನಾವಣೆ ನಂತರ ಒಗ್ಗೂಡುವ ಸಾಧ್ಯತೆ ಕಾಣಿಸುತ್ತಿಲ್ಲ ಎಂದರು.
ಪಶ್ಚಿಮ ಬಂಗಾಳದಲ್ಲಿ ಒಟ್ಟಾರೆ 78.49% ಮತದಾನವಾಗಿದ್ದು, ಹಿಂಸಾಚಾರ, ಇವಿಎಂ ದೋಷಗಳ ನಡುವೆಯೂ ಜನತೆ ಭಾರೀ ಪ್ರಮಾಣದಲ್ಲಿ ಮತದಾನ ಮಾಡಿದ್ದಾರೆ.
west bengal, surprice pollsters, ram madhav