ಪೌರತ್ವ ತಿದ್ದುಪಡಿ ಮಸೂದೆಗೆ ಟಿಎಂಸಿ ಬೆಂಬಲ ನೀಡಬೇಕು: ಪ್ರಧಾನಿ ಮೋದಿ

ಕೋಲ್ಕತ: ಪೌರತ್ವ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​ ಬೆಂಬಲ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಠಾಕೂರ್​ ನಗರದಲ್ಲಿ ಆಯೋಜಿಸಿದ್ದ ಲೋಕಸಭಾ ಚುನಾವಣಾ ಪೂರ್ವ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸ್ವಾತಂತ್ರ್ಯದ ನಂತರ ಹಲವು ಜನರು ಬೇರೆ ದೇಶಗಳಿಗೆ ಹೋಗಿ ನೆಲೆಸಿದ್ದಾರೆ. ಆದರೆ, ಅಲ್ಲಿ ಶೋಷಣೆ, ಕಿರುಕುಳಕ್ಕೆ ಒಳಗಾದ ಬಳಿಕ ಮರಳಿ ಭಾರತಕ್ಕೆ ಬಂದು ನೆಲೆಸಿದ್ದಾರೆ. ಅವರಿಗೆ ಭಾರತದ ಪೌರತ್ವ ನೀಡಲೆಂದೇ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕರಿಸಲಾಗಿದೆ ಎಂದರು.

ಈಗಾಗಲೇ ಲೋಕಸಭೆಯಲ್ಲಿ ಅಂಗೀಕೃತವಾದ ಈ ಮಸೂದೆಯನ್ನು ತೃಣಮೂಲ ಕಾಂಗ್ರೆಸ್ ರಾಜ್ಯಸಭೆಯಲ್ಲಿ ಬೆಂಬಲಿಸಬೇಕು ಎಂದು ಹೇಳಿದರು.

ಜನಸಾಮಾನ್ಯರ ಸಂಕಷ್ಟ ಪರಿಹರಿಸುವ ನಿಟ್ತಿನಲ್ಲಿ ಸರ್ಕಾರ ಬದ್ಧವಾಗಿದೆ. ಇಲ್ಲಿನ ಸುಲಿಗೆಕೋರ ಸಿಂಡಿಕೇಟ್​ನಿಂದ ನೀವೆಲ್ಲ ಎಷ್ಟು ಶೋಷಿತರಾಗಿದ್ದೀರಿ ಎಂಬುದನ್ನು ಅರಿತಿದ್ದೇವೆ. ಮಧ್ಯವರ್ತಿಗಳು ನಿಮ್ಮ ಹಣ ಸುಲಿಗೆ ಮಾಡುತ್ತಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ನೇರವಾಗಿ ನಿಮಗೇ ಯೋಜನೆಗಳನ್ನು ತಲುಪಿಸುವ ವ್ಯವಸ್ಥೆ ಮಾಡಿದೆ. ಹಣವನ್ನು ನಿಮ್ಮ ಬ್ಯಾಂಕ್​ ಅಕೌಂಟ್​ಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಅದನ್ನು ಪೂರ್ಣವಾಗಿ ನೀವು ಪಡೆಯಬಹುದು ಎಂದರು.

ಪಶ್ಚಿಮ ಬಂಗಾಳ ಇತಿಹಾಸದಲ್ಲಿ ಠಾಕೂರ್​ ನಗರಕ್ಕೆ ಪ್ರಮುಖ ಸ್ಥಾನವಿದೆ. ಸ್ವಾತಂತ್ರ್ಯ ನಂತರ ಹಲವು ದಶಕಗಳ ನಂತರ ನಿಮ್ಮನ್ನು ಭೇಟಿಯಾಗುತ್ತಿರುವುದು ನನಗೆ ಸಂತೋಷ ತಂದಿದೆ. ಹಳ್ಳಿಗಳನ್ನು ನಿರ್ಲಕ್ಷ್ಯ ಮಾಡುವುದರಿಂದ ದೇಶದ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಸಿಎಂ ಮಮತಾ ಬ್ಯಾನರ್ಜಿಯವರು ಇಲ್ಲಿಗೆ ಯಾವ ಕಾರಣಕ್ಕೆ ಬಂದಿಲ್ಲ ಎಂಬುದು ನನಗೆ ಈಗ ಗೊತ್ತಾಯಿತು. ಇಷ್ಟೊಂದು ಜನರು ನಮಗೆ ತೋರಿಸುತ್ತಿರುವ ಪ್ರೀತಿಯಿಂದ ಅವರು ಭಯಭೀತರಾಗಿದ್ದಾರೆ ಎಂದು ಕುಟುಕಿದರು.

ಠಾಕೂರ್​ ನಗರದಲ್ಲಿ ಹೆಚ್ಚಾಗಿ ಈ ಹಿಂದೆ ಪೂರ್ವಪಾಕಿಸ್ತಾನದಿಂದ ವಲಸೆ ಬಂದ ಮತುವಾ ಜನಾಂಗದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇವರೆಲ್ಲ ಧಾರ್ಮಿಕ ಕಿರುಕುಳದ ಹಿನ್ನೆಲೆಯಲ್ಲಿ 1950ರಲ್ಲಿ ವಾಪಸ್​ ಬಂದವರು. ಈಗ ಮೋದಿಯವರು ರ್ಯಾಲಿಯನ್ನು ಅಲ್ಲೇ ಆಯೋಜಿಸಿ ಪೌರತ್ವ ತಿದ್ದುಪಡಿ ಮಸೂದೆ ಬಗ್ಗೆ ಪ್ರಸ್ತಾಪ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ.

prime minister modi, west-bengal,Rally, trunamula congress

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ