ಬೆಂಗಳೂರು, ಮೇ.20- ಚುನಾವಣೋತ್ತರ ಸಮೀಕ್ಷೆಗಳ ಮೂಲಕ ಬಿಜೆಪಿ ಜನರ ಮನಸ್ಸನ್ನು ಬದಲಾವಣೆ ಮಾಡಿ ಮತಯಂತ್ರಗಳನ್ನು ತಿರುಚುವ ಪ್ರಯತ್ನ ನಡೆಸಿದೆ ಎಂದು ಹಿರಿಯ ಕಾಂಗ್ರೆಸಿಗ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಲೋಕಸಭೆ ಚುನಾವಣೆಗಿಂತಲೂ ಬಿಜೆಪಿಗೆ 45 ಸೀಟುಗಳು ಕಡಿಮೆಯಾಗುತ್ತವೆ ಎಂಬ ಮಾಹಿತಿ ಇದೆ.ಆದರೆ ಕೆಲವು ಖಾಸಗಿ ಸಂಸ್ಥೆಗಳು ನಡೆಸಿರುವ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಗೆಲ್ಲುತ್ತದೆ ಎಂದು ಹೇಳಿವೆ. ಇದು ಒಂದು ವ್ಯವಸ್ಥಿತ ಹುನ್ನಾರ ಎಂದು ಆರೋಪಿಸಿದರು.
ಬಿಜೆಪಿ ಹೆಚ್ಚು ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಂಬಿಸುವ ಮೂಲಕ ಜನರ ಮನಸ್ಥಿತಿಯನ್ನು ಹದಕ್ಕೆ ತಂದು ಮತಯಂತ್ರಗಳನ್ನು ತಿರುಚಿರುವುದರಿಂದ ತಪ್ಪಿಸಿಕೊಳ್ಳುವ ಕುತಂತ್ರವನ್ನು ಬಿಜೆಪಿ ಮತ್ತು ಸಂಘ ಪರಿವಾರ ಮಾಡಿವೆ ಎಂದು ಆರೋಪಿಸಿದರು.
ಈ ಮೂಲಕ ಕೇಂದ್ರದಲ್ಲಿ ಸರ್ಕಾರ ರಚಿಸುವ ಪ್ರಯತ್ನ ನಡೆಸಿರುವ ಕಾಂಗ್ರೆಸ್ ಮತ್ತು ಮಹಾಘಟ್ ಬಂಧನ್ ಮುಖಂಡರ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ ನಡೆದಿದೆ.
ಕೇಂದ್ರ ಸರ್ಕಾರ ಮತಯಂತ್ರಗಳನ್ನು ತಿರುಚುತ್ತಿದೆ ಎಂದು ಚಂದ್ರಬಾಬು ನಾಯ್ಡು, ಅಖಿಲೇಶ್ ಯಾದವ್, ಮಾಯವತಿ ಸೇರಿ ಎಲ್ಲರೂ ಆರೋಪ ಮಾಡಿದರು.ಶೇ.50ರಷ್ಟು ಮತಯಂತ್ರಗಳಿಗೆ ವಿವಿಪ್ಯಾಟ್ ಅಳವಡಿಸುವಂತೆ ಒತ್ತಾಯಿಸಲಾಗಿತ್ತು ಎಂದು ಹೇಳಿದರು.
ಈ ಹಿಂದೆಯೂ ಇದೇ ರೀತಿ ಸಮೀಕ್ಷೆಗಳು ಬಂದಿದ್ದವು.ಸೋನಿಯಾ ಗಾಂಧಿ ಸೋಲುತ್ತಾರೆ ಎಂದು ಹೇಳಲಾಗಿತ್ತು.ಆದರೆ ಫಲಿತಾಂಶ ಬೇರೆ ರೀತಿಯೇ ಬಂತು ಎಂದು ವಿಶ್ಲೇಷಿಸಿದರು.